Site icon Vistara News

ಅಮೆರಿಕದಲ್ಲೂ ‘ಭಾರತ’ ಬ್ರ್ಯಾಂಡ್; ಚುನಾವಣೆಯಲ್ಲಿ ಭಾರತ ಮೂಲದ 10 ಅಭ್ಯರ್ಥಿಗಳಿಗೆ ಜಯ

Suhas Subramanyam

10 Indian-Americans win state and local elections in US

ವಾಷಿಂಗ್ಟನ್:‌ ಅಮೆರಿಕದ ಐಟಿ, ಎಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರಗಳಲ್ಲಿ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲೂ ಭಾರತ ಮೂಲದವರ (Indian Americans) ಪ್ರಾಬಲ್ಯ ಹೆಚ್ಚಿದೆ. ಭಾರತ ಮೂಲದ ಕಮಲಾ ಹ್ಯಾರಿಸ್‌ (Kamala Harris) ಅವರು ಅಮೆರಿಕ ಉಪಾಧ್ಯಕ್ಷೆಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನು ಅಮೆರಿಕದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಅನಿವಾಸಿ ಭಾರತೀಯರ ಪ್ರಾಬಲ್ಯವೇ ಹೆಚ್ಚಿದೆ. ಚುನಾವಣೆಯಲ್ಲಿ ಭಾರತ ಮೂಲದ ಕನಿಷ್ಠ 10 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಹೈದರಾಬಾದ್‌ ಮೂಲದ ಘಜಾಲ ಹಶ್ಮಿ ಅವರು ವರ್ಜೀನಿಯಾದಿಂದ ಸ್ಟೇಟ್‌ ಸೆನೆಟ್‌ಗೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇದೇ ರಾಜ್ಯದಲ್ಲಿ ಸುಹಾಸ್‌ ಸುಬ್ರಮಣ್ಯಂ ಅವರು ಕೂಡ ಸ್ಟೇಟ್‌ ಸೆನೆಟ್‌ಗೆ ಮತ್ತೆ ಲಗ್ಗೆ ಇಟ್ಟಿದ್ದಾರೆ. ಉದ್ಯಮಿ ಕಣ್ಣನ್‌ ಶ್ರೀನಿವಾಸನ್‌ ಅವರು ಕೂಡ ವರ್ಜೀನಿಯಾದಿಂದಲೇ ಸ್ಟೇಟ್‌ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಇವರು ಮೂವರು ಕೂಡ ಡೆಮಾಕ್ರಟಿಕ್‌ ಪಕ್ಷದವರಾಗಿದ್ದಾರೆ.

ಕಣ್ಣನ್‌ ಶ್ರೀನಿವಾಸನ್.

ಮತದಾರರಿಗೆ ಧನ್ಯವಾದ ಎಂದ ಸುಹಾಸ್‌

ಗೆಲುವು ಸಾಧಿಸಿದ ಬಳಿಕ ಸುಹಾಸ್‌ ಸುಬ್ರಮಣ್ಯಂ ಅವರು ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. “ನನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ, ಎಲ್ಲ ಮತದಾರರಿಗೂ ಧನ್ಯವಾದಗಳು. ನಿಮ್ಮ ಪರವಾಗಿ ನಾನು ಯಾವಾಗಲೂ ಧ್ವನಿ ಎತ್ತುತ್ತೇನೆ. ಭವಿಷ್ಯದ ಪೀಳಿಗೆಯ ಏಳಿಗೆಗೆ ಶ್ರಮಿಸುತ್ತೇನೆ. ಪ್ರತಿನಿಧಿಸಲು ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ಪೋಸ್ಟ್‌ ಮಾಡಿದ್ದಾರೆ.

ನ್ಯೂಜೆರ್ಸಿಯಲ್ಲಿ ಭಾರತ ಮೂಲದವರಾದ ವಿನ್‌ ಗೋಪಾಲ್‌ ಹಾಗೂ ರಾಜ್‌ ಮುಖರ್ಜಿ ಅವರು ಕೂಡ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಕೂಡ ಸ್ಟೇಟ್‌ ಸೆನೆಟ್‌ ಪ್ರವೇಶಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ನೀಲ್‌ ಮಖೀಜಾ, ವೆಸ್ಟ್‌ ಡಿಸ್ಟ್ರಿಕ್ಟ್‌ನಲ್ಲಿ ಡಾ.ಅನಿತಾ ಜೋಶಿ ಅವರು ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: NAVIKA Summit: ಭರ್ಜರಿಯಾಗಿ ನಡೆದ ನಾವಿಕ ವಿಶ್ವ ಕನ್ನಡ ಸಮಾವೇಶ; ಅನಿವಾಸಿಗಳ ಕನ್ನಡ ಪ್ರೇಮ ಶ್ಲಾಘಿಸಿದ ಶಿವಣ್ಣ

ಹಿಯೋದ ಗಹನ್ನ ಸಿಟಿ ಅಟಾರ್ನಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಿಯಾ ತಮಿಳರಸನ್‌ ಅವರು ಜಯಭೇರಿ ಬಾರಿಸಿದ್ದಾರೆ. ಕನೆಕ್ಟಿಕಟ್‌ನ ಹರ್ಟ್‌ಫೋರ್ಡ್‌ ಮೇಯರ್‌ ಆಗಿ ಅರುಣನ್‌ ಅರುಳಂಪಲಂ ಆಯ್ಕೆಯಾಗಿದ್ದಾರೆ. ಹೀಗೆ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಚುನಾವಣೆಯಲ್ಲಿ ಭಾರತ ಮೂಲದ 10 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಇವರಲ್ಲಿ ಬಹುತೇಕರು ಜೋ ಬೈಡೆನ್‌ ನೇತೃತ್ವದ ಡೆಮಾಕ್ರಟಿಕ್‌ ಪಕ್ಷದವರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version