ಲಖನೌ: ಕಾಂಗ್ರೆಸ್ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಜುಲೈ 26ರಂದು ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಚಪ್ಪಲಿ ಹೊಲಿಯುವ ರಾಮ್ ಚೇಟ್ (Ram Chet) ಎಂಬುವರ ಅಂಗಡಿಗೆ ಭೇಟಿ ನೀಡಿದ್ದರು. ಸುಲ್ತಾನ್‌ಪುರದಲ್ಲಿರುವ ಚಪ್ಪಲಿ ಅಂಗಡಿಗೆ (UP Cobbler) ರಾಹುಲ್ ಗಾಂಧಿ ಅವರು ಭೇಟಿ ನೀಡಿದ ಬಳಿಕ ರಾಮ್ ಚೇಟ್ ಅವರ ದಿಸೆಯೇ ಬದಲಾಗಿದೆ. ಜನ ಅವರ ಅಂಗಡಿಗೆ ಬಂದು ಚಪ್ಪಲಿ ಹೊಲಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಿದ್ದಾರೆ. ಇನ್ನು, ರಾಹುಲ್ ಗಾಂಧಿ ಅವರು ಭೇಟಿ ವೇಳೆ ಹೊಲಿದ ಚಪ್ಪಲಿಗೆ ಈಗ ಭಾರಿ ಬೇಡಿಕೆ ಉಂಟಾಗಿದೆ. ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಉದ್ಯಮಿಯೊಬ್ಬರು 10 ಲಕ್ಷ ರೂ. ಆಫರ್ ನೀಡಿದ್ದಾರೆ. ಇಷ್ಟಾದರೂ ರಾಮ್ ಚೇಟ್ ಅವರು ಮಾರಾಟ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಮಾಧ್ಯಮಗಳೊಂದಿಗೆ ರಾಮ್ ಚೇಟ್ ಮಾತನಾಡಿದ್ದು, “ರಾಹುಲ್ ಗಾಂಧಿ ಅವರು ನನ್ನ ಅಂಗಡಿಗೆ ಬಂದು ಹೋದ ಬಳಿಕ ನನ್ನ ಬದುಕೇ ಬದಲಾಗಿದೆ. ಕಾರು, ಬೈಕುಗಳಲ್ಲಿ ಬರುವ ಜನ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಹೊಲಿದ ಚಪ್ಪಲಿಗೆ ಭಾರಿ ಬೇಡಿಕೆ ಉಂಟಾಗಿದೆ. 5 ಲಕ್ಷ ರೂ. ಕೊಡುತ್ತೇವೆ, 10 ಲಕ್ಷ ರೂ. ಕೊಡುತ್ತೇವೆ ಆ ಚಪ್ಪಲಿ ಕೊಡು ಎನ್ನುತ್ತಿದ್ದಾರೆ. ನಾನು ಆ ಚಪ್ಪಲಿ ಹೊಲಿಯಲು ಬಿಟ್ಟು ಹೋದ ಗ್ರಾಹಕನಿಗೂ ಕೊಡುವುದಿಲ್ಲ. ಚಪ್ಪಲಿಯ ಮೊತ್ತವನ್ನು ಗ್ರಾಹಕನಿಗೆ ನೀಡುತ್ತೇನೆ. ಇದನ್ನು ಮಾರಾಟ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೊಲಿಗೆ ಯಂತ್ರ ಕೊಡಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಮ್ ಚೇಟ್ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲ, ಅವರಿಗೆ ಚಪ್ಪಲಿ, ಬೂಟುಗಳನ್ನು ಹೊಲಿಯುವ ಯಂತ್ರವನ್ನು ಕೊಡಿಸಿದ್ದಾರೆ. ರಾಹುಲ್ ಗಾಂಧಿ ಭೇಟಿ ನೀಡಿದ ಮರುದಿನ ಅಂದರೆ ಜುಲೈ 27ರಂದು ರಾಮ್ ಚೇಟ್ ಅವರಿಗೆ ಹೊಲಿಗೆ ಯಂತ್ರ ತಲುಪಿದೆ. ಇದರಿಂದ ಅವರು ಸುಲಭವಾಗಿ ಚಪ್ಪಲಿ ಹಾಗೂ ಶೂಗಳನ್ನು ಹೊಲಿಯಲು ಸಾಧ್ಯವಾಗುತ್ತಿದೆ. ರಾಹುಲ್ ಗಾಂಧಿ ಭೇಟಿ ಬಳಿಕ ಅವರ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿದೆ.
#WATCH | Congress MP & LoP Lok Sabha Rahul Gandhi meets and interacts with a cobbler during his visit to UP's Sultanpur pic.twitter.com/gwEhvGuJ95
— ANI (@ANI) July 26, 2024
ರಾಹುಲ್ ಗಾಂಧಿ ಅವರು ಜುಲೈ 26ರಂದು ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದಾದ ಬಳಿಕ ಅವರು ಲಖನೌಗೆ ತೆರಳುವ ಮಾರ್ಗದ ಮಧ್ಯೆ ಸುಲ್ತಾನ್‌ಪುರದಲ್ಲಿರುವ ರಾಮ್ ಚೇಟ್ ಅಂಗಡಿಗೆ ತೆರಳಿದ್ದರು. ರಾಮ್ ಚೇಟ್ ಅವರ ಅಂಗಡಿ ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ಕಾಂಗ್ರೆಸ್ ನಾಯಕ ಮಾತನಾಡಿದ್ದರು. ಇದೇ ವೇಳೆ ರಾಹುಲ್ ಗಾಂಧಿ ಅವರು ಚಪ್ಪಲಿ ಹೊಲಿದಿದ್ದರು. ಈ ಫೋಟೊ ಹಾಗೂ ವಿಡಿಯೊ ವೈರಲ್ ಆಗಿದ್ದವು.
ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ