ಜಪಾನ್ ಪಶ್ಚಿಮ ನಗರ ನಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಶುಕ್ರವಾರ ಗುಂಡಿನ ದಾಳಿಗೆ ಒಳಗಾದ ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ರೀತಿ ರಾಜಕಾರಣಿಗಳ ಹತ್ಯೆ ಜಗತ್ತಿನಲ್ಲಿ ಹಿಂದೆಯೂ ನಡೆದಿದೆ.
ಹೆಚ್ಚಿನ ಅಧಿಕಾರ ಬಯಸಿದ ರೋಮನ್ ದೊರೆ ಜೂಲಿಯಸ್ ಸೀಸರ್‌ನನ್ನು ಸೆನೆಟರ್‌ಗಳ ಗುಂಪೇ ಇರಿದು ಕೊಂದ ಘಟನೆ ಇತಿಹಾಸ ಪುಟದಲ್ಲಿ ಹೀಗೆ ದಾಖಲಾದ, ಜಗತ್ತಿನಾದ್ಯಂತ ಹೆಚ್ಚು ಚರ್ಚೆಗೆ ಕಾರಣವಾದ ಮೊದಲ ಘಟನೆ ಎನ್ನಬಹುದು. ಶಾಂತಿಯನ್ನೇ ಸಾರಿದ ಭಾರತದ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಸಹ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆಗ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಹೀಗೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಹತ್ಯೆಯಾದ ಹತ್ತು ನಾಯಕರ ಪಟ್ಟಿ ಇಲ್ಲಿದೆ.
೧. ಪ್ಯಾಟ್ರಿಸ್ ಲುಮುಂಬಾ
ಹತ್ಯೆಯಾದ ದಿನ: ಜನವರಿ ೧೭, ೧೯೬೧
ಆಫ್ರಿಕಾ ಖಂಡದ ಪ್ರಮುಖ ದೇಶವಾಗಿರುವ ಕಾಂಗೋ ಗಣರಾಜ್ಯದ ಮೊದಲ ಅಧ್ಯಕ್ಷ, 20 ನೇ ಶತಮಾನದ ಹೋರಾಟದ ಐಕಾನ್ ಆಗಿದ್ದ ಪ್ಯಾಟ್ರಿಸ್ ಲುಮುಂಬಾ ಅವರ ಹತ್ಯೆ ೧೯೬೧ರಲ್ಲಿ ನಡೆದಿತ್ತು. ಕಾಂಗೋದ ಖನಿಜ ಸಂಪತ್ತು ವಿದೇಶಿಯರ ಪಾಲಾಗಬಾರದು ಎಂದು ಹೋರಾಟ ನಡೆಸಿ, ದೇಶದಲ್ಲಿ ಸ್ಥಳೀಯ ಸರ್ಕಾರ ರಚನೆಗೊಳ್ಳಲು ಕಾರಣರಾಗಿದ್ದ ಲುಮುಂಬಾ ಅವರನ್ನು ಬೆಲ್ಜೀಯಂ ಸೇನೆ ಮತ್ತು ಅಮೆರಿಕದ ಸಿಐಎ ಸೂಚನೆ ಮೇರೆಗೆ ಸೇನಾಪಡೆಯ ತುಕಡಿಯೊಂದು ಗುಂಡಿಕ್ಕಿ ಕೊಂದಿತ್ತು. ಇದು ಆಫ್ರಿಕಾದಲ್ಲಿ ನಡೆಯುತ್ತಿದ್ದ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟಕ್ಕೆ ಅಘಾತ ನೀಡಿತ್ತು.
೨. ಜಾನ್ ಎಫ್ ಕೆನಡಿ
ಹತ್ಯೆಯಾದ ದಿನ: ನವೆಂಬರ್ ೨೨, ೧೯೬೩
ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಕಾರಿನಲ್ಲಿ ಹೋಗುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲೀ ಹಾರ್ವೆ ಆಸ್ವಾಲ್ಡ್ ಎಂಬಾತ ಟೆಕ್ಸಾಸ್‌ನ ಶಾಲಾ ಕಟ್ಟಡದ ಪುಸ್ತಕ ಭಂಡಾರದಿಂದ ಹೊಡೆದ ಗುಂಡು ಕೆನಡಿಯವರನ್ನು ಬಲಿ ತೆಗೆದುಕೊಂಡಿತ್ತು. ಕಾರಿನಲ್ಲಿದ್ದ ಟೆಕ್ಸಾಸ್‌ನ ರಾಜ್ಯಪಾಲ ಜೇಮ್ಸ್ ಕನೋಲಿಗೂ ಗುಂಡು ತಗುಲಿತ್ತು. ಕೊನೆಗೆ ಹಂತಕ ಆಸ್ವಾಲ್ಡ್‌ನನ್ನು ನೈಟ್ ಕ್ಲಬ್‌ನ ಮಾಲೀಕನೊಬ್ಬ ಹತ್ಯೆ ಮಾಡಿದ. ಆದರೆ ಆತ ಕೆನಡಿಯನ್ನು ಏಕೆ ಕೊಂದ ಎಂಬುದು ಇನ್ನೂ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆಯ ದಾಖಲೆಗಳು ಈಗ ಬಹಿರಂಗಗೊಂಡಿದ್ದರೂ, ನಿಖರ ಮಾಹಿತಿ ಲಭ್ಯವಿಲ್ಲ.
೩. ಮಾರ್ಟಿನ್ ಲೂಥರ್ ಕಿಂಗ್ ಜೂ.
ಹತ್ಯೆಯಾದ ದಿನ: ಏಪ್ರಿಲ್ ೪, ೧೯೬೮
ಅಮೆರಿಕದ ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂ. ಅವರನ್ನು ಟೆನ್ನೆಸ್ಸಿ ರಾಜ್ಯದ ಮೆಂಫಿಸ್‌ನಲ್ಲಿ ಹತ್ಯೆ ಮಾಡಲಾಗಿತ್ತು. ವರ್ಣಭೇದ ನೀತಿಯ ವಿರುದ್ಧ ಹೋರಾಟ ನಡೆಸುತ್ತಿದ್ದ ಮಾರ್ಟಿನ್ ಲೂಥರ್ ಕಿಂಗ್ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅಮೆರಿಕದ ಯುದ್ಧ ನೀತಿಯನ್ನು ಖಂಡಿಸಿದ ಕಾರಣಕ್ಕಾಗಿ, ಸಮಾನತೆ ಮತ್ತು ನಾಗರಿಕ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ ಕಾರಣಕ್ಕಾಗಿ ಅವರನ್ನು ಜೇಮ್ಸ್ ಎರ್ಲ್ ರೇ ಎಂಬಾತ ಗುಂಡಿಕ್ಕಿ ಕೊಂದಿದ್ದ. ಇವರ ಹತ್ಯೆಯಿಂದಾಗಿ ಅಮೆರಿಕದಲ್ಲಿ ದೊಡ್ಡ ಆಂದೋಲನವೇ ನಡೆದು ವರ್ಣಭೇದ ನೀತಿ ಕೊನೆಗೊಂಡಿತ್ತು.
೪. ಎಟ್ಜ್‌ಹಾಕ್ ರಾಬಿನ್
ಹತ್ಯೆಯಾದ ದಿನ: ನವೆಂಬರ್ ೪, ೧೯೯೫
ಇಸ್ರೇಲಿನ ಪ್ರಧಾನಿ ಎಟ್ಜ್‌ಹಾಕ್ ರಾಬಿನ್ ಟೆಲ್‌ಅವೀವ್‌ದಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಾಗ ಅವರನ್ನು ಐಗಲ್ ಅಮಿರ್ ಎಂಬಾತ ಗುಂಡಿಕ್ಕಿ ಹತ್ಯೆ ಮಾಡಿದ್ದ. ರಾಬಿನ್ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿದ್ದಕ್ಕಾಗಿ ಸಿಟ್ಟಿಗೆದ್ದಿದ್ದ ಬಲಪಂಥೀಯ ಐಗಲ್ ಈ ಹತ್ಯೆ ಮಾಡಿದ್ದ. ಇವರ ಹತ್ಯೆಯಿಂದಾಗಿ ಈ ಎರಡು ದೇಶಗಳ ನಡುವಿನ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ.
೫. ಬೆನಜೀರ್ ಭುಟ್ಟೋ
ಹತ್ಯೆಯಾದ ದಿನ: ಡಿಸೆಂಬರ್ ೨೭, ೨೦೦೭
ರಾವಲ್ಪಿಂಡಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರನ್ನು ಆತ್ಮಾಹುತಿ ದಾಳಿಯ ಮೂಲಕ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಮಾಜಿ ಸೇನಾಧಿಕಾರಿ ಪರ್ವೇಜ್ ಮುಷರಫ್ ಪಲಾಯನಗೈದ ಅಪರಾಧಿ ಎಂದು ಘೋಷಿಸಿತ್ತು. ಅಧಿಕಾರದ ಕಾರಣದಿಂದ ಈ ಹತ್ಯೆ ನಡೆಸಲಾಗಿದ್ದು, ಹತ್ಯೆ ನಡೆದ ನಂತರ ನಡೆದ ಚುನಾವಣೆಯಲ್ಲಿ ಭುಟ್ಟೋ ಅವರ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧಿಕಾರಕ್ಕೆ ಬಂದಿತ್ತು.
೬. ಇಂದಿರಾ ಗಾಂಧಿ
ಹತ್ಯೆಯಾದ ದಿನ: ಅಕ್ಟೋಬರ್ ೩೧, ೧೯೮೪
ಒಟ್ಟು ಹದಿನೈದು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಅವರು ಪತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆಯನ್ನು ಹತ್ತಿಕ್ಕಲು ಆಪರೇಷನ್ ಬ್ಲೂಸ್ಟಾರ್ ನಡೆಸಿದ ಕಾರಣಕ್ಕಾಗಿ ಸತ್ವಂತ್ ಸಿಂಗ್ ಮತ್ತು ಕೆಹರ್ ಸಿಂಗ್ ಎಂಬ ಸಿಖ್ ಧರ್ಮೀಯ ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
೭. ರಾಜೀವ್ ಗಾಂಧಿ
ಹತ್ಯೆಯಾದ ದಿನ: ಮೇ ೧೭, ೧೯೯೧
ತಮಿಳುನಾಡಿನ ಶ್ರೀ ಪೆರಂಬದೂರು ದೇವಾಲಯದ ಮೈದಾನದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿಯವರನ್ನು ಆತ್ಮಾಹುತಿ ದಾಳಿಯ ಮೂಲಕ ಹತ್ಯೆ ಮಾಡಲಾಗಿತ್ತು. ತೆನ್ಮೋಜಿ ರಾಜರತ್ನಮ್ ಅಲಿಯಾಸ್ ಧನು ಎಂಬಾಕೆ ರಾಜೀವ್ ಗಾಂಧಿಯವರಿಗೆ ಶುಭಾಶಯ ಹೇಳುವ ನೆಪದಲ್ಲಿ ಅವರ ಪಾದಗಳಿಗೆ ನಮಸ್ಕರಿಸುತ್ತಾ ತನ್ನನ್ನೂ ಸ್ಫೋಟಿಸಿಕೊಂಡು ಹತ್ಯೆ ಮಾಡಿದಳು. ಶ್ರೀಲಂಕಾಕ್ಕೆ ಶಾಂತಿಪಾಲನಾ ಪಡೆ ಕಳುಹಿಸಿದ್ದನ್ನು ವಿರೋಧಿಸಿ ಎಲ್‌ಟಿಟಿಇ ಈ ದಾಳಿ ನಡೆಸಿತ್ತು. ಈ ಹತ್ಯೆಯ ರೂವಾರಿ ಶಿವರಸನ್‌ನನ್ನು ಮುಂದೆ ಬೆಂಗಳೂರಿನಲ್ಲಿ ಪತ್ತೆ ಮಾಡಲಾಯಿತಾದರೂ ಆತ ಆತ್ಮಹತ್ಯೆ ಮಾಡಿಕೊಂಡ.
೮. ರಫಿಕ್ ಹರಿರಿ
ಹತ್ಯೆಯಾದ ದಿನ: ಫೆಬ್ರವರಿ ೧೪, ೨೦೦೫
ಲೆಬನಾನಿನಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಪ್ರಧಾನಿ ರಫಿಕ್ ಹರಿರಿಯನ್ನು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಸುಮಾರಿ ೧,೮೦೦ ಕೆಜಿ ಸ್ಫೋಟಕದ ಮೂಲಕ ಅವರ ಹತ್ಯೆ ನಡೆದಿದ್ದು, ಈ ಸಂದರ್ಭದಲ್ಲಿ ಅವರ ಜತೆಗಿದ್ದ ಇನ್ನೂ ೨೩ಮಂದಿ ಬಲಿಯಾಗಿದ್ದರು. ಯುವಕನೋರ್ವ ಈ ಬಾಂಬ್ ಸ್ಫೋಟಿಸಿ ಹತ್ಯೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಈ ದಾಳಿಯ ಹಿಂದೆ ಸಿರಯಾ ಸರ್ಕಾರದ ಕೈವಾಡವಿತ್ತೆಂದು ಹೇಳಲಾಗುತ್ತಿದೆ. ಸಿರಿಯಾ ಮತ್ತು ಲೆಬನಾನ್‌ನ ಸಂಘರ್ಷವೇ ಈ ಹತ್ಯೆಗೆ ಕಾರಣವಾಗಿತ್ತು.
೯. ರಣಸಿಂಗೆ ಪ್ರೇಮದಾಸ
ಹತ್ಯೆಯಾದ ದಿನ: ಮೇ ೧, ೧೯೯೩
ಎರಡು ಬಾರಿ ಶ್ರೀಲಂಕಾದ ಪ್ರಧಾನಿಯಾಗಿದ್ದ ರಣಸಿಂಗೆ ಪ್ರೇಮದಾಸ ಎಲ್‌ಟಿಟಿಇ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿದ್ದರು. ಕೊಲೊಂಬೊದಲ್ಲಿ ನಡೆದ ಈ ದಾಳಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಹಂತಕನನ್ನು ಕುಲವೀರಸಂಗಮ್ ವೀರಕುಮಾರ ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ ಪ್ರೇಮದಾಸ ಮಾತ್ರವಲ್ಲದೆ, ಇನ್ನೂ ೧೭ ಮಂದಿ ಬಲಿಯಾಗಿದ್ದರು. ಸೈಕಲ್‌ನಲ್ಲಿ ಬಂದ ಹಂತಕ ಈ ದಾಳಿ ನಡೆಸಿದ್ದು, ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ನಡೆಸಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆಸಿದ್ದ.
೧೦. ಮುಅಮ್ಮರ್ ಗಡಾಫಿ
ಹತ್ಯೆಯಾದ ದಿನ: ಅಕ್ಟೋಬರ್ ೨೦, ೨೦೧೧
ಲಿಬಿಯಾದ ಸರ್ವಾಧಿಕಾರಿ ನಾಯಕ, ಮಾಜಿ ಪ್ರಧಾನಿ ಮುಅಮ್ಮರ್ ಗಡಾಫಿಯನ್ನು “ರಾಷ್ಟ್ರೀಯ ಸಂಧಿಕಾಲ ಮಂಡಳಿʼʼ (ಎನ್‌ಟಿಸಿ) ಯೋಧರು ಹತ್ಯೆ ಮಾಡಿದ್ದರು. ಸಿದ್ರಾದಲ್ಲಿ ಈ ಬಂಡುಕೋರರೊಡನೆ ನಡೆದ ಕಾಳಗ ನಡೆದ ಸಂದರ್ಭದಲ್ಲಿ ಅವರ ಹತ್ಯೆಯಾಗಿದೆ. ಅವರು ಸುಮಾರು ನಾಲ್ಕು ದಶಕಗಳ ಕಾಲ ಲಿಬಿಯಾವನ್ನು ಆಳಿದ್ದರು. ಅಧಿಕಾರ ತ್ಯಜಿಸಲು ಒಪ್ಪದೇ ಇದ್ದ ಕಾರಣ ಅವರ ಹತ್ಯೆ ನಡೆದಿತ್ತು.
ಇದನ್ನೂ ಓದಿ | Shinjo shot dead: ಆ ಮಾಜಿ ಯೋಧ ಯಮಗಾಮಿಗೆ ಕೊಲ್ಲುವಂಥ ಸಿಟ್ಟೇನಿತ್ತು ಅಬೆ ಮೇಲೆ?