ನವದೆಹಲಿ: ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇಶದ ಮುಸ್ಲಿಂ ಮಹಿಳೆಯರು ಪುರುಷರು ಜತೆಗಿರದೆ (ಮೆಹ್ರಮ್) ಪವಿತ್ರ ಹಜ್ ಯಾತ್ರೆಯನ್ನು ಕೈಗೊಂಡು, ತಾಯ್ನಾಡಿಗೆ ಮರಳಿದ್ದಾರೆ. ಪುರುಷರ ಸಹಾಯವಿಲ್ಲದೆ ಮೆಕ್ಕಾ ಯಾತ್ರೆ ಕೈಗೊಂಡ 101 ಮುಸ್ಲಿಂ ಮಹಿಳೆಯರು ಬುಧವಾರ ದೆಹಲಿಗೆ ವಾಪಸಾಗಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳಿದ ದೆಹಲಿ ಹಜ್ ಸಮಿತಿ ಮುಖ್ಯಸ್ಥೆ ಕೌಸರ್ ಜಹಾನ್ ಅವರು ಯಾತ್ರಿಕರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.
“ಪುರುಷರ ನೆರವಿಲ್ಲದೆ ಈ ಬಾರಿ 4,314 ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದಾರೆ. 2018ರಿಂದ 2022ರ ಅವಧಿಯಲ್ಲಿ 3,400 ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದರು. ಮಹಿಳೆಯರ ಸಬಲೀಕರಣ ದಿಸೆಯಲ್ಲಿ ಕ್ರಮ ತೆಗೆದುಕೊಂಡ ಕಾರಣ ಹೆಣ್ಣುಮಕ್ಕಳು ಮೆಹ್ರಮ್ ಇಲ್ಲದೆ ಹಜ್ ಯಾತ್ರೆ ಕೈಗೊಂಡಿದ್ದಾರೆ. ಇದು ಭಾರತದ ಪಾಸ್‌ಪೋರ್ಟ್ ಮೇಲೆ ಹೆಣ್ಣುಮಕ್ಕಳು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ವಿದೇಶದಲ್ಲಿ ಕೂಡ ಅವರು ಸೇಫ್ ಆಗಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಜ್ ಕಮಿಟಿಯಿಂದ ಸ್ವಾಗತ
#WATCH | Delhi Haj Committee Chief Kausar Jahan welcomes a woman returning from Haj, at the Delhi airport. This year, 4314 Indian Muslim women participated in the Haj pilgrimage without Mehram. pic.twitter.com/gH2f8AesUT
— ANI (@ANI) July 12, 2023
ಹಜ್ ಯಾತ್ರೆ ಪೂರ್ಣಗೊಳಿಸಿ ಭಾರತಕ್ಕೆ ಬಂದ ಜರೀನಾ ಖತೂನ್ ಎಂಬುವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ನಾನು ಇದುವರೆಗೆ ಒಮ್ಮೆಯೂ ಒಬ್ಬಳೇ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಅದರಲ್ಲೂ, ಒಬ್ಬಳೇ ಮೆಕ್ಕಾ ಯಾತ್ರೆ ಕೈಗೊಂಡಿರುವುದು ಖುಷಿ ತಂದಿದೆ. ಭಾರತದಿಂದ ತೆರಳಿದ ಮಹಿಳೆಯರು ಕೂಡ ಉತ್ತಮವಾಗಿ ಸಹಕಾರ ನೀಡಿದರು. ಇದರಿಂದಾಗಿ ಹಜ್ ಯಾತ್ರೆ ಉತ್ತಮ ಅನುಭವ ನೀಡಿತು” ಎಂದು 65 ವರ್ಷದ ಜರೀನಾ ತಿಳಿಸಿದರು.
ಇದನ್ನೂ ಓದಿ: ಮೆಕ್ಕಾದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಭಿತ್ತಿ ಪತ್ರ ಪ್ರದರ್ಶಿಸಿದ ಭಾರತೀಯ ಯುವಕ ಸೌದಿ ಪೊಲೀಸ್ ವಶ
ಮುಸ್ಲಿಂ ಮಹಿಳೆಯರು ಪುರುಷರ ನೆರವಿಲ್ಲದೆ ಹಜ್ ಯಾತ್ರೆ ಕೈಗೊಳ್ಳುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇದರಿಂದಾಗಿ ಮುಸ್ಲಿಂ ಮಹಿಳೆಯ ಪ್ರತಿ ಕುಟುಂಬಕ್ಕೆ 80 ಸಾವಿರ ರೂ. ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಮೊದಲು ಒಬ್ಬ ಪುರುಷನಾದರೂ ಮುಸ್ಲಿಂ ಮಹಿಳೆ ಜತೆ ಮೆಕ್ಕಾಗೆ ತೆರಳಬೇಕಿತ್ತು. ಇನ್ನು, ಸೌದಿ ಅರೇಬಿಯಾ ಕೂಡ ಮಹಿಳಾ ಸ್ವಾತಂತ್ರ್ಯಕ್ಕೆ ಬೆಲೆ ಕೊಟ್ಟು ಕಳೆದ ವರ್ಷ ಮೆಹ್ರಮ್ ಇಲ್ಲದೆ ಮುಸ್ಲಿಂ ಮಹಿಳೆಯರು ಮೆಕ್ಕಾ ಯಾತ್ರೆ ಕೈಗೊಳ್ಳಬಹುದು ಎಂದು ಹೇಳಿದೆ. ಆದರೆ, 45 ವರ್ಷ ದಾಟಿದ ಮಹಿಳೆಯರು ಮಾತ್ರ ಒಬ್ಬರೇ ಬರಬಹುದು ಎಂದು ತಿಳಿಸಿದೆ.