ಔರಂಗಾಬಾದ್: ಕಳೆದ ವರ್ಷ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಸುಮಾರು 1023 ರೈತರು ಆತ್ಮಹತ್ಯೆ (Farmers Suicide) ಮಾಡಿಕೊಂಡಿದ್ದಾರೆ. ಇದೇ ಪ್ರದೇಶ ವ್ಯಾಪ್ತಿಯಲ್ಲಿ 2021ರಲ್ಲಿ 887 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮರಾಠವಾಡ ಪ್ರದೇಶವು ಜಲ್ನಾ, ಔರಂಗಾಬಾದ್, ಪರ್ಭಾನಿ, ಹಿಂಗೋಲಿ, ನಾಂದೇಡ್, ಲಾತೂರ್, ಉಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಗಳನ್ನು ಒಳಗೊಂಡಿದೆ.
2001ರಿಂದ ಇಲ್ಲಿಯವರೆಗೆ ಈ 8 ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿ ಸುಮಾರು 10,431 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂದಾಯ ವಿಭಾಗೀಯ ಕಚೇರಿಯ ಅಂಕಿ ಸಂಖ್ಯೆಗಳು ಈ ಮಾಹಿತಿಯನ್ನು ಖಚಿತಪಡಿಸುತ್ತವೆ.
2001ರಿಂದ 2010ರ ನಡುವೆ, 2006ರಲ್ಲಿ ಗರಿಷ್ಠ 379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗೆಯೇ, 2011ರಿಂದ 2020ರ ನಡುವೆ ಹತ್ತು ವರ್ಷಗಳ ಪೈಕಿ 2015ರಲ್ಲಿ ಗರಿಷ್ಠ 1,133 ರೈತರು ಪ್ರಾಣವನ್ನು ಕಳೆದುಕೊಂಡಿದ್ದರು. 2001ರಿಂದ ಮೃತರಾಗಿರುವ 10,431 ರೈತರ ಪೈಕಿ, 7605 ರೈತ ಕುಟುಂಬಗಳಿಗೆ ಸರ್ಕಾರದ ನಿಯಮಗಳ ಅನುಸಾರ ನೆರವು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಮರಾಠವಾಡಾ ಪ್ರದೇಶದಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಮತ್ತು ಕೆಲವ ಕಡೆ ಅತಿವೃಷ್ಟಿ ಕಂಡುಬಂದಿದೆ. ಇದು ಬೆಳೆಗಾರರ ಕಷ್ಟಗಳನ್ನು ಹೆಚ್ಚಿಸಿದೆ ಎಂದು ಕಾರ್ಯಕರ್ತರು ಮತ್ತು ಅಧಿಕಾರಿಗಳು ಹೇಳುತ್ತಾರೆ. ಈ ಭಾಗದ ನೀರಾವರಿ ಜಾಲವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇದು ಕೂಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಕಾರಣವಾಗುತ್ತಿದೆ.
ಇದನ್ನೂ ಓದಿ | Suicide case | ಸಾಲ ಭಾದೆ ತಾಳದೆ ಯುವ ರೈತ ಆತ್ಮಹತ್ಯೆ