ಭೋಪಾಲ್: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಆಧುನಿಕ ಕಾಲಘಟ್ಟದಲ್ಲಿ ಮದುವೆಯಾಗಲು ಕೂಡ ವಯಸ್ಸಿನ ಹಂಗಿಲ್ಲ ಎಂಬಂತಾಗಿದೆ. 60 ವರ್ಷ ದಾಟಿದವರೂ ಇತ್ತೀಚೆಗೆ ಮದುವೆಯಾಗುತ್ತಿದ್ದಾರೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಸ್ವಾತಂತ್ರ್ಯ ಹೋರಾಟಗಾರರೊಬ್ಬರು (Freedom Fighter) ತಮ್ಮ 103ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 103 ವರ್ಷದ ಹಬೀಬ್ ನಜರ್ (Habib Nazar) ಅವರು 49 ವರ್ಷದ ಫಿರೋಜ್ ಜಹಾನ್ (Firoz Jahan) ಎಂಬುವರನ್ನು ವರಿಸಿದ್ದಾರೆ. ಇವರ ಮದುವೆಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭೋಪಾಲ್‌ನ ಇತ್ವಾರ ನಿವಾಸಿಯಾದ ಹಬೀಬ್ ನಜರ್ ಅವರು ಫಿರೋಜ್ ಜಹಾನ್ ಅವರನ್ನು 2023ರಲ್ಲಿಯೇ ಮದುವೆಯಾಗಿದ್ದು, ಇವರ ಮದುವೆಯ ಫೋಟೊ ಹಾಗೂ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಬೀಬ್ ನಜರ್ ಅವರು ಆಟೋದಲ್ಲಿ ಫಿರೋಜ್ ಜಹಾನ್ ಅವರನ್ನು ಕರೆದುಕೊಂಡು ಹೋಗುತ್ತಿದ್ದು, ಇದೇ ವೇಳೆ ಜನ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಆಗ ಹಬೀಬ್ ನಜರ್ ಅವರು ನಸುನಕ್ಕು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
“ನನಗೆ ಈಗ 103 ವರ್ಷ ಹಾಗೂ ನನ್ನ ಹೆಂಡತಿಗೆ 50 ವರ್ಷ ವಯಸ್ಸು. ನಾನು ಕಳೆದ 2023ರಲ್ಲಿ ಮದುವೆಯಾಗಿದ್ದೇನೆ. 50 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಮದುವೆಯಾಗಿದ್ದೆ. ನನ್ನ ಮೊದಲ ಪತ್ನಿ ತೀರಿಕೊಂಡ ಬಳಿಕ ಲಖನೌನಲ್ಲಿ ಎರಡನೇ ಮದುವೆಯಾದೆ. ಒಂದೂವರೆ ವರ್ಷದ ಹಿಂದೆ ನನ್ನ ಎರಡನೇ ಪತ್ನಿಯೂ ತೀರಿಕೊಂಡಳು. ಇದರಿಂದಾಗಿ ನಾನು ಏಕಾಂತದಿಂದ ಕುಗ್ಗಿಹೋಗಿದ್ದೆ. ಈಗ ಮೂರನೇ ಮದುವೆಯಾಗಿದ್ದೇನೆ” ಎಂದು ಹಬೀಬ್ ನಜರ್ ಅವರು ಹೇಳಿದ್ದಾರೆ. ಫಿರೋಜ್ ಜಹಾನ್ ಅವರ ಪತಿ ತೀರಿಕೊಂಡ ಕಾರಣ ಈಗ ಎರಡನೇ ಮದುವೆಯಾಗಿದ್ದಾರೆ.
ಇದನ್ನೂ ಓದಿ: Rama Mandir : ಆ ಜೋಡಿಯ ಮದುವೆಗೆ ರಾಮನೇ ಸಾಕ್ಷಿ, ಕೈಯಲ್ಲೇ ಎರಡು ಕಿ.ಮೀ. ನಡೆದ ಯುವಕ!
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಬೀಬ್ ನಜರ್ ಅವರು ಸುತ್ತಮುತ್ತಲಿನ ಊರುಗಳಲ್ಲಿ ‘ಮಂಝಾಲೆ ಭಾಯಿ’ (ಸಹೋದರ) ಎಂದೇ ಖ್ಯಾತರಾಗಿದ್ದಾರೆ. “ನನಗೆ 100 ವರ್ಷ ಆಗಿದೆ. ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ಫಿರೋಜ್ ಜಹಾನ್ ಅವರು ನನ್ನನ್ನು ಮದುವೆಯಾಗಲು ಒಪ್ಪಿದ್ದಾರೆ ಎಂಬ ವಿಷಯ ತಿಳಿಯಿತು. ಇದಾದ ಬಳಿಕ ಅವರನ್ನು ಮದುವೆಯಾಗಿದ್ದೇನೆ” ಎಂದು ಹೇಳಿದ್ದಾರೆ. ಇವರ ಮದುವೆ ವಿಚಾರವು ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರ ಗೊತ್ತಿತ್ತು. ಫೋಟೊ ವೈರಲ್ ಆಗಿ, ಈಗ ದೇಶಾದ್ಯಂತ ಗಮನ ಸೆಳೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ