ಲಖನೌ: ಸರ್ಕಾರಿ ಯೋಜನೆಗಳ ಲಾಭ ಪಡೆದು, ಸಂಸಾರ ಸಾಗಿಸುವ ಕೋಟ್ಯಂತರ ಮಹಿಳೆಯರು ದೇಶದಲ್ಲಿದ್ದಾರೆ. ಆದರೆ, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ (Maharajganj District) ನಿಚ್ಲಾಲ್ ಬ್ಲಾಕ್‌ನಲ್ಲಿ ವಿಚಿತ್ರ ಪ್ರಕರಣವು ಭಾರಿ ಸುದ್ದಿಯಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ (PM Awas Yojana) ಮೊದಲ ಕಂತಿನ ಮೊತ್ತವಾದ 40 ಸಾವಿರ ರೂ. ಖಾತೆಗೆ ಜಮೆಯಾಗುತ್ತಲೇ 11 ವಿವಾಹಿತ ಮಹಿಳೆಯರು ತಮ್ಮ ಪ್ರಿಯತಮರೊಂದಿಗೆ ಪರಾರಿಯಾಗಿದ್ದಾರೆ. ಇದರಿಂದ ಮಹಿಳೆಯರ ಗಂಡಂದಿರು ಕಂಗಲಾಗಿದ್ದಾರೆ.
ಹೌದು, ನಿಚ್ಲಾಲ್ ಬ್ಲಾಕ್‌ನಲ್ಲಿರುವ 11 ಗ್ರಾಮಗಳ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಪಿಎಂ ಆವಾಸ್ ಯೋಜನೆಯ ಮೊದಲ ಕಂತಿನ ಮೊತ್ತವು ಜಮೆಯಾಗುತ್ತಲೇ ಪತಿಯರನ್ನು ತೊರೆದು ಪರಾರಿಯಾಗಿದ್ದಾರೆ. ಪ್ರಕರಣದ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿರುವ ಮಧ್ಯೆಯೇ, ಮಹಿಳೆಯರ ಗಂಡಂದಿರು ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ. ನಮ್ಮ ಪತ್ನಿಯರು ಪರಾರಿಯಾಗಿದ್ದು, ಅವರ ಬ್ಯಾಂಕ್ ಖಾತೆಗೆ ಎರಡನೇ ಕಂತಿನ ಮೊತ್ತವನ್ನು ಜಮೆ ಮಾಡದಂತೆ ಅಂಗಲಾಚಿದ್ದಾರೆ ಎಂದು ತಿಳಿದುಬಂದಿದೆ.
2023-24ನೇ ವಿತ್ತೀಯ ಸಾಲಿನಲ್ಲಿ ಮಹಾರಾಜ್‌ಗಂಜ್ ಜಿಲ್ಲೆ ನಿಚ್ಲಾಲ್ ಬ್ಲಾಕ್‌ನ 108 ಗ್ರಾಮಗಳ 2,350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಶೇ.90ರಷ್ಟು ಮನೆಗಳ ನಿರ್ಮಾಣವು ಪೂರ್ಣಗೊಂಡಿದೆ. ತುತ್ತಿಬರಿ, ಶೀತಲಾಪುರ, ಚಾಟಿಯಾ, ರಾಮನಗರ, ಕಿಶನ್‌ಪುರ, ಮೇಧೌಳಿ ಸೇರಿ 11 ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮೊದಲ ಕಂತಿನ 40 ಸಾವಿರ ರೂ. ಜಮೆಯಾಗಿದೆ. ಖಾತೆಗೆ ಹಣ ಜಮೆಯಾಗುವ ಕುರಿತು ಮೊದಲೇ ಮಾಹಿತಿ ಇದ್ದ ಮಹಿಳೆಯರು, ತಮ್ಮ ಪ್ರಿಯತಮರಿಗೆ ವಿಷಯ ತಿಳಿಸಿದ್ದರು. ಹಣ ಜಮೆಯಾಗುತ್ತಲೇ ಅವರು ಗೆಳೆಯರೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಆಸೆಗೆ ಮಡದಿಯ ಕಳೆದುಕೊಂಡರು
ಸ್ವಂತ ಮನೆ ಹೊಂದುವ ಕನಸಿನೊಂದಿಗೆ ಮಹಿಳೆಯರ ಪತಿಯರು ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಿದ್ದರು. ಅರ್ಜಿ ಹಾಕುವಾಗ ಪತ್ನಿಯರ ಬ್ಯಾಂಕ್ ಖಾತೆಯ ಸಂಖ್ಯೆಯನ್ನೇ ನಮೂದಿಸಿದ್ದರು. ಹಾಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದೆ. ಈಗ ಪತಿಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಮ್ಮ ಬ್ಯಾಂಕ್ ಖಾತೆಯಿಂದ ಮಾಸಿಕವಾಗಿ ಹಣ ಕಡಿತಗೊಳಿಸಬಾರದು ಎಂಬುದಾಗಿ ಅಂಗಲಾಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Murder case : ಕಾಡಿಗೆ ಹೋದ ಮಹಿಳೆಯ ಕತ್ತು ಕೊಯ್ದು ಕೊಲೆ; ಹಂತಕರು ಪರಾರಿ