ಬೆಂಗಳೂರು: ದೇಶದ ಸರ್ಕಾರಿ ಸೇವೆಗಳಲ್ಲಿ ಕೇವಲ 5% ಇದ್ದ ಮುಸ್ಲಿಂ ಸೇರಿ ಎಲ್ಲ ಅಲ್ಪಸಂಖ್ಯಾತ ಸಮುದಾಯದ ಪ್ರಾತಿನಿಧಿತ್ವ 2014ರ ನಂತರದಲ್ಲಿ ನಿರಂತರ ಪ್ರಯತ್ನದ ಫಲವಾಗಿ 10% ದಾಟಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಏಳಿಗೆಗಾಗಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಬ್ಯಾಕಪ್ ಟು ಬ್ರಿಲಿಯನ್ಸ್ ಯೋಜನೆಯಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯಗಳ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಪ್ರಮಾಣ ಇದರಿಂದ ಹೆಚ್ಚಾಗಿದೆ. 2014ಕ್ಕೆ ಮುನ್ನ ಸರ್ಕಾರಿ ಸೇವೆಗಳಲ್ಲಿ ಪ್ರಮಾಣ 5% ಇದ್ದದ್ದು ಈಗ 10% ದಾಟಿದೆ.
ವಿಭಿನ್ನ ಸುದ್ದಿ: ಭಾರತದ ಸುತ್ತ ಚೀನಾ ಸಾಲದ ಸುಳಿ: ಭೌಗೋಳಿಕ ರಾಜಕೀಯ ಹಿಡಿತಕ್ಕೆ ಹೊಸ ಮಾರ್ಗ
ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಮೂಲಕ 21.5 ಲಕ್ಷ ಅಲ್ಪಸಂಖ್ಯಾತ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 2014ಕ್ಕೆ ಮುನ್ನ ಕೇವಲ 20 ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗಿತ್ತು. ಕೇವಲ ಎಂಟು ವರ್ಷದಲ್ಲಿ ಇಷ್ಟು ಪ್ರಮಾಣದ ಸಾಧನೆ ಮಾಡಲಾಗಿದೆ. 2014ಕ್ಕೆ ಮುನ್ನ ಕೇವಲ ಮೂರು ಕೋಟಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿತ್ತು. ಇದೀಗ ಕಳೆದ ಎಂಟು ವರ್ಷದಲ್ಲಿ 5.2 ಕೋಟಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಅರ್ಧಕ್ಕೇ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಈ ಹಿಂದೆ 70% ಇದ್ದದ್ದು ಈಗ 30%ಕ್ಕೆ ಇಳಿದಿದೆ. ಇದನ್ನು 0%ಕ್ಕೆ ಇಳಿಸುವ ಗುರಿಯಿದೆ ಎಂದು ಸಚಿವರು ತಿಳಿಸಿದರು.
ಮುಸ್ಲಿಂ ಯುವಕರಿಗೆ ವಸತಿಸಹಿತ ಅಕಾಡೆಮಿ
ಮುಸ್ಲಿಂ ವಿದ್ಯಾರ್ಥಿಗಳನ್ನು ಅಖಿಲ ಭಾರತ ಸೇವೆಗಳಿಗೆ ತರಬೇತುಗೊಳಿಸುವ ಅಂಜುಮನ್-ಐ-ಇಸ್ಲಾಂ ಯುಪಿಎಸ್‌ಸಿ ಅಕಾಡೆಮಿಗೆ(ಎಐಯುಪಿಎಸ್‌ಸಿ) ಸಂಸ್ಥೆಗೆ ಮುಖ್ತಾರ್ ಅಬ್ಬಾಸ್ ನಕ್ವಿ ಇತ್ತೀಚೆಗೆ ಚಾಲನೆ ನೀಡಿದರು. ಮುಂಬೈನ ಅಂಜುಮನ್-ಐ-ಇಸ್ಲಾಂ ಸಂಸ್ಥೆಯು ಈ ಯೋಜನೆಯನ್ನು ನಿರ್ವಹಿಸಲಿದ್ದು, ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಹಣಕಾಸು ನೆರವು ನೀಡಲಿದೆ. ಈ ವರ್ಷದ ತರಬೇತಿಗೆ 1,141 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 760 ಜನರು ಪ್ರವೇಶ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, 2021ರಿಂದಲೇ ಆನ್‌ಲೈನ್ ಮೂಲಕ ಕೋಚಿಂಗ್ ನಡೆಯುತ್ತಿದೆ. ಇದೀಗ ಕೋವಿಡ್ ನಿಯಮಾವಳಿಗಳು ಸಡಿಲಗೊಂಡಿರುವುದರಿಂದ ವಸತಿ ಸಹಿತ ತರಬೇತಿಗಾಗಿ ಅವರನ್ನು ಆಹ್ವಾನಿಸಿ 2022ರ ಜನವರಿಯಿಂದ ಚಾಲನೆಯಲ್ಲಿದೆ.