ಉತ್ತರಪ್ರದೇಶ: ಗೋರಖನಾಥ್ ದೇವಸ್ಥಾನದ ಮೇಲೆ ಏಕಾಏಕಿ ದಾಳಿ ನಡೆಸಿದ್ದೂ ಅಲ್ಲದೆ ಪೋಲಿಸ್ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದ ಘಟನೆ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮುಂಬೈ ತಲುಪಿದೆ.
ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಮುರ್ತುಜಾ ಅಬ್ಬಾಸಿಯನ್ನು ಉತ್ತರಪ್ರದೇಶ ಪೋಲಿಸರು ಈಗಾಗಲೆ ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದೆ.
ಆರೋಪಿ ಮುರ್ತುಜಾ ಈ ಮುನ್ನ ಮುಂಬೈನಲ್ಲಿ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಎಂಬ ಮಾಹಿತಿಯಿತ್ತು. ಹಾಗಾಗಿ ಭಯೊತ್ಪಾದನಾ ನಿಗ್ರಹ ದಳ ಮುಂಬೈಯಲ್ಲಿರುವ ಮುರ್ತುಜಾ ಮನೆಗೆ ಭೇಟಿ ನೀಡಿ ಆರೋಪಿಯ ತಂದೆಯನ್ನು ವಿಚಾರಣೆ ಮಾಡಿದ್ದಾರೆ.
ಮಾನಸಿಕ ಸಮತೋಲನ ಸರಿ ಇಲ್ಲ ಎಂದ ತಂದೆ
ತನಿಖೆಗೆ ಸಹಕರಿಸಿದ ಮುರ್ತುಜಾರ ತಂದೆ ಮುನೀರ್ ಅಹ್ಮದ್ ಅಬ್ಬಾಸಿ ʼಆತ ಕುಟುಂಬದವರನ್ನು ಭೇಟಿ ಮಾಡದೇ ಮೂರು ವರ್ಷಗಳಾಗಿವೆʼ ಎಂದು ತಿಳಿಸಿದ್ದಾರೆ.
ಇನ್ನು, ದೇವಸ್ಥಾನಕ್ಕೆ ದಾಳಿ ನಡೆಸಿದ ಘಟನೆಯ ಕುರಿತು ಮಾತನಾಡಿದ ಮುನೀರ್ ಅಬ್ಬಾಸಿ ʼ ಅವನು ಉದ್ದೇಶಪೂರ್ವಕವಾಗಿ ದಾಳಿ ನಡೆಸಿರಲು ಸಾಧ್ಯವಿಲ್ಲ. ನನ್ನ ಮಗನ ಮಾನಸಿಕ ಸಮತೋಲನ ಸರಿ ಇಲ್ಲ, ಆತ ಕಿರಿಯ ವಯಸ್ಸಿನಿಂದಲೇ ಖಿನ್ನತೆಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆʼ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮುರ್ತುಜಾ ಅಬ್ಬಾಸಿಯ ಪ್ರಕರಣದ ತನಿಖೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.