ಶ್ರೀನಗರ: ಉಗ್ರರ ಉಪಟಳದಿಂದ ಕಂಗೆಟ್ಟಿದ್ದ ಕಾಶ್ಮೀರ ಕಣಿವೆಯಲ್ಲಿ ಸದ್ಯ ಶಾಂತಿ ನೆಲೆಸಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ 1.8 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಇದು 10 ವರ್ಷದಲ್ಲೇ ಇದು ದಾಖಲೆಯಾಗಿದೆ.
ಮುಂದಿನ ಎರಡು ತಿಂಗಳಲ್ಲಿ ದೇಶದ ಬಯಲು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗುವುದರಿಂದ ಕಣಿವೆ ರಾಜ್ಯಕ್ಕೆ ಭೇಟಿ ನೀಡುವವರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಜೂನ್ 30ರಿಂದ 43 ದಿನಗಳ ಕಾಲ ನಡೆಯುವ ಅಮರನಾಥ ವಾರ್ಷಿಕ ಯಾತ್ರೆ ಆರಂಭವಾಗಲಿದ್ದು, ಈ ಸಮಯದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಮಾರ್ಚ್ ತಿಂಗಳೊಂದರಲ್ಲೇ 1,79,970 ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ದಾಖಲೆಯಾಗಿದೆ. ಮತ್ತಷ್ಟು ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿದ್ದೇವೆ ಎಂದು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
2021ರಲ್ಲಿ 6 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರೂ ಕೋವಿಡ್-19ರ ಬಳಿಕ ಇಲ್ಲಿಗೆ ಬರುವವರ ಸಂಖ್ಯೆ ಇಳಿಮುಖವಾಯಿತು. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಾಗ ಉಂಟಾದ ಬೆಳವಣಿಗೆ ಹಾಗೂ ಕೊರೋನಾ, ಲಾಕ್‌ಡೌನ್‌ನಿಂದ ಕಣಿವೆ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ನಲುಗಿತ್ತು.