ಪಾಟ್ನಾ: ಸುಮಾರು 1,200 ವರ್ಷಗಳಷ್ಟು ಹಳೆಯದಾದ ಎರಡು ಕಲ್ಲಿನ ವಿಗ್ರಹಗಳು ಪುರಾತನ ನಳಂದಾ ವಿಶ್ವವಿದ್ಯಾನಿಲಯದ ಸಮೀಪವಿರುವ ಕೊಳದ ಹೂಳು ತೆಗೆಯುವ ಸಂದರ್ಭದಲ್ಲಿ ಜಲಮೂಲದಿಂದ ಪತ್ತೆಯಾಗಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಬಿಹಾರ ಸರ್ಕಾರದ ಜಲ-ಜೀವನ್-ಹರಿಯಾಲಿ ಯೋಜನೆ ಅಡಿಯಲ್ಲಿ ಇಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಪ್ರಾಚೀನ ನಳಂದ ಮಹಾವಿಹಾರ ಸಮೀಪದ ಸರ್ಲಿಚಕ್ ಗ್ರಾಮದ ತಾರ್ಸಿನ್ಹ್ ಕೊಳದಿಂದ ವಿಗ್ರಹಗಳು ಪತ್ತೆಯಾಗಿವೆ. ಈ ಪ್ರದೇಶ ಪಾಟ್ನಾದಿಂದ ಸುಮಾರು 88 ಕಿ.ಮೀ ದೂರದಲ್ಲಿದೆ. ಆದರೆ ಈ ಎರಡು ವಿಗ್ರಹಗಳ ವಿವರಗಳನ್ನು ಭಾರತೀಯ ಪುರಾತತ್ವ ಸಮೀಕ್ಷೆ ಅಥವಾ ಆಡಳಿತವು ಬಹಿರಂಗಪಡಿಸಿಲ್ಲ.
ಈ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರಿಗೆ ವಿಗ್ರಹಗಳು ಮೊದಲು ಪತ್ತೆಯಾದವು. ಅವರು ಇವುಗಳನ್ನು ಇರಿಸಲು ಗುಡಿಯನ್ನು ನಿರ್ಮಿಸಲು ಯೋಜನೆ ಮಾಡಲು ಪ್ರಾರಂಭಿಸಿದರು. ಅದು ನಮ್ಮ ಅಧಿಕಾರಿಗಳಿಗೆ ತಿಳಿದು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ನಾವು ಊಹಿಸಿದ ಪ್ರಕಾರ ಅವು ಬಹುಶಃ 1200 ವರ್ಷಗಳಷ್ಟು ಹಳೆಯವು ಎಂದು ಪಾಟ್ನಾ ವೃತ್ತದ ಪುರಾತತ್ವ ಅಧೀಕ್ಷಕ ಗೌತಮಿ ಭಟ್ಟಾಚಾರ್ಯ ತಿಳಿಸಿದ್ದಾರೆ.
ನಾವು ಅವುಗಳನ್ನು ನಳಂದಾ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಬಯಸುತ್ತೇವೆ. ಭಾರತೀಯ ಟ್ರೆಷರ್ ಟ್ರೋವ್ ಆಕ್ಟ್ 1878ರ ನಿಬಂಧನೆಗಳ ಪ್ರಕಾರ ಈ ವಿಗ್ರಹಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ನಾನು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: UNESCO List | ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಮೋದಿ ಜನಿಸಿದ ವಡ್ನಗರ್ ಪಟ್ಟಣ!
ಒಂದು ವರ್ಷದ ಹಿಂದೆ ಇದೇ ಕೊಳದಲ್ಲಿ 1,300 ವರ್ಷಗಳಷ್ಟು ಹಳೆಯದಾದ ಪಾಲ ಕಾಲದ ನಾಗದೇವಿಯ ವಿಗ್ರಹ ಪತ್ತೆಯಾಗಿತ್ತು. ಇದನ್ನು ನಳಂದದ ASI ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ನಳಂದ ಮಹಾವಿಹಾರ ತಾಣವು ಕ್ರಿಸ್ತಪೂರ್ವ 3ನೇ ಶತಮಾನದಿಂದ ಕ್ರಿಸ್ತಶಕ 13ನೇ ಶತಮಾನದವರೆಗಿನ ಮಹಾವಿದ್ಯಾಲಯವಾಗಿತ್ತು. ಈ ತಾಣ ಪುರಾತತ್ತ್ವ ಅವಶೇಷಗಳನ್ನು ಒಳಗೊಂಡಿದೆ. ಸ್ತೂಪಗಳು, ದೇವಾಲಯಗಳು, ವಿಹಾರಗಳು (ವಸತಿ ಮತ್ತು ಶೈಕ್ಷಣಿಕ ಕಟ್ಟಡಗಳು), ಗಾರೆ, ಕಲ್ಲು ಮತ್ತು ಲೋಹದ ಪ್ರಮುಖ ಕಲಾಕೃತಿಗಳನ್ನು ಒಳಗೊಂಡಿವೆ. ನಳಂದ ಮಹಾವಿಹಾರ ಭಾರತ ಉಪಖಂಡದ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯ. ನಿರಂತರ 800 ವರ್ಷ ಇಲ್ಲಿ ಜ್ಞಾನ ವಿನಿಮಯ ನಡೆಯುತ್ತಿತ್ತು.
ಇದನ್ನೂ ಓದಿ: ಸಾವಿರ ವರ್ಷಗಳ ಹಳೇ ದೇಗುಲ ಕಾಣೆ; ಕುಣಿಗಲ್‌ನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಹುಡುಕಾಟ!