ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Election Result) ಬಿಜೆಪಿಯ ಅಭೂತಪೂರ್ವ ಗೆಲುವು, ಇದು ಲೋಕಸಭೆ ಚುನಾವಣೆಯ ಮೇಲೆ ಬೀರುವ ಪರಿಣಾಮ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ತಂತ್ರಗಾರಿಕೆ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಸೋಲಲ್ಲ, ಮುಖಭಂಗವೇ ಆಗಿದೆ ಎಂಬುದು ಕೂಡ ಗಮನಹರಿಸಬೇಕಾದ ಸಂಗತಿಯಾಗಿದೆ.
ಗುಜರಾತ್‌ನ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿತ್ತು. ಕಳೆದ ಬಾರಿ ತೀವ್ರ ಸ್ಪರ್ಧೆಯೊಡ್ಡಿದ್ದ ಕಾಂಗ್ರೆಸ್, ಈ ಬಾರಿಯೂ ಅದೇ ಸ್ಫೂರ್ತಿಯೊಂದಿಗೆ ಹೋರಾಟ ಮಾಡುತ್ತದೆ ಎಂದು ಹೇಳಲಾಗಿತ್ತು. ಅತ್ತ, ಆಮ್ ಆದ್ಮಿ ಪಕ್ಷವಂತೂ, ಪಂಜಾಬ್‌ನಂತೆ ಗುಜರಾತ್‌ನಲ್ಲೂ ಸರ್ಕಾರ ರಚಿಸುವ ಉತ್ಸಾಹದಲ್ಲಿತ್ತು. ಅದಕ್ಕಾಗಿ, ಅರವಿಂದ ಕೇಜ್ರಿವಾಲ್ ಅವರು ಸಾಲು ಸಾಲು ಭೇಟಿ ಜತೆಗೆ, ಜನರಿಗೆ ಹತ್ತಾರು ಭರವಸೆಗಳನ್ನೂ ನೀಡಿದ್ದರು. ಆದರೆ, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಿದ ೧೮೧ ಕ್ಷೇತ್ರಗಳ ಪೈಕಿ ೧೨೮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅತ್ತ, ಕಾಂಗ್ರೆಸ್‌ನ ೪೧ ಅಭ್ಯರ್ಥಿಗಳು ಕೂಡ ಠೇವಣಿ ಕಳೆದುಕೊಂಡಿದ್ದಾರೆ.
ಯಾವುದೇ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ಪೈಕಿ ಅಭ್ಯರ್ಥಿಯು ಶೇ.೧೬.೬೭ರಷ್ಟು ಮತಗಳನ್ನು ಪಡೆಯದಿದ್ದರೆ, ಆ ಅಭ್ಯರ್ಥಿಯು ಠೇವಣಿ ಕಳೆದುಕೊಳ್ಳುತ್ತಾರೆ. ಇದು ಅಭ್ಯರ್ಥಿಗಳಿಗೆ ಮುಖಭಂಗ ಉಂಟಾದಂತೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಹಾಗೂ ಆಪ್ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಕಳೆದುಕೊಂಡಿರುವುದು ಉಭಯ ಪಕ್ಷಗಳಿಗೆ ಮುಖಭಂಗವಾದಂತಾಗಿದೆ.
ಇದನ್ನೂ ಓದಿ | Gujarat Election Result | ಗುಜರಾತ್‌ನ ಎಸ್‌ಟಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಮೆಟ್ಟಿಲಾದ ಆಮ್ ಆದ್ಮಿ ಪಾರ್ಟಿ!