ಪಟನಾ: ಬಿಹಾರದ ದಿನಗೂಲಿ ಕಾರ್ಮಿಕ ಮನೋಜ್ ಯಾದವ್ ಅವರಿಗೆ 14 ಕೋಟಿ ರೂ. ಆದಾಯ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದ (Income Tax notice) ಘಟನೆ ನಡೆದಿದೆ.
ಕಳೆದ ಶನಿವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಕಾರ್‌ಗಹಾರ್ ಗ್ರಾಮಕ್ಕೆ ತೆರಳಿ ದಿನಗೂಲಿ ಕಾರ್ಮಿಕ ಮನೋಜ್ ಯಾದವ್ ಮನೆಗೆ ತೆರಳಿ 14 ಕೋಟಿ ರೂ. ತೆರಿಗೆ ಬೇಡಿಕೆಯ ನೋಟಿಸ್ ಅನ್ನು ನೀಡಿತು. ತೆರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ದಿನಗೂಲಿ ಕಾರ್ಮಿಕನ ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂ. ಹಣಕಾಸು ವರ್ಗಾವಣೆಯಾಗಿದ್ದು, ಅದಕ್ಕೆ ಆದಾಯ ತೆರಿಗೆ ಕಟ್ಟಬೇಕಾಗಿದೆ.
ನೋಟಿಸ್ ಕಂಡ ಯಾದವ್ ಮತ್ತವರ ಕುಟುಂಬಕ್ಕೆ ಭಾರಿ ಶಾಕ್ ಆಗಿತ್ತು. ಆದಾಯ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದ ಮನೋಜ್ ಯಾದವ್, ತಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಆಸ್ತಿಯನ್ನು ಹಲವು ಸಲ ಮಾರಿದರೂ ಅಷ್ಟು ದುಡ್ಡು ಸಿಗಲಾರದು ಎಂದು ವಿವರಿಸಿದರು.
ದಿಲ್ಲಿ, ಹರಿಯಾಣ, ಪಂಜಾಬ್‌ನಲ್ಲಿ ನಾನಾ ಖಾಸಗಿ ಕಂಪನಿಗಳಲ್ಲಿ ಯಾದವ್ ಕೆಲಸ ಮಾಡಿದ್ದರು. 2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಬಳಿಕ ಊರಿಗೆ ಮರಳಿದ್ದರು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಾಗ ಆಧಾರ್ ಮತ್ತು ಪ್ಯಾನ್ ಕಾರ್ಡ್ ಪ್ರತಿಗಳನ್ನು ತೆಗೆದುಕೊಂಡಿದ್ದರು. ಈ ದಾಖಲೆಯನ್ನು ಕಂಪನಿಗಳು ತೆರಿಗೆಯಿಂದ ನುಣುಚಿಕೊಳ್ಳಲು ದುರ್ಬಳಕೆ ಮಾಡಿರಬಹುದು ಎಂದು ಯಾದವ್ ಆರೋಪಿಸಿದ್ದಾರೆ. ತೆರಿಗೆ ನೋಟಿಸ್ ನೀಡಲು ಬಂದಿದ್ದ ಅಧಿಕಾರಿಗಳಿಗೂ ಯಾದವ್ ಪರಿಸ್ಥಿತಿ ಕಂಡು ಅಚ್ಚರಿಯಾಗಿತ್ತು.