ನವ ದೆಹಲಿ: ಹಿಂದುಗಳೆಂಬ ಕಾರಣಕ್ಕೆ ಅವರು ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದರು. ಭಾರತಕ್ಕೆ ಬಂದರೆ ಆಸರೆ ಸಿಗಬಹುದು ಎಂಬ ಆಸೆಯಿಂದ ಇದ್ದರು. ಆದರೆ, ಈಗ ಆ ಕನಸು ಈಡೇರದೆ ಭಾರವಾದ ಹೃದಯದಿಂದ ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ.. ಇದು ಗುರುವಾರ ಪಾಕಿಸ್ತಾನದ ಗಡಿ ದಾಟಿ ಹೋದ ೧೫೦೦ ಹಿಂದೂ ನಿರಾಶ್ರಿತರ ಕಥೆ.
ಭಾರತಕ್ಕೆ ಬಂದರೆ ಪೌರತ್ವ ಸಿಗಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು. ಆದರೆ, ಅದನ್ನು ಪಡೆಯುವುದು ಹೇಗೆ? ಏನೆಲ್ಲ ಪ್ರಕ್ರಿಯೆಗಳಿವೆ ಎನ್ನುವುದು ಅವರಲ್ಲಿ ಹೆಚ್ಚಿನವರಿಗೆ ತಿಳಿದಿರಲಿಲ್ಲ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಜತೆಗೆ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವವರೆಗೆ ಇಲ್ಲಿ ಬದುಕಲು ಬೇಕಾದಷ್ಟು ಆಪತ್ ಧನವೂ ಅವರ ಕೈಯಲ್ಲಿ ಇರಲಿಲ್ಲ.
ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳ ಸಂಘಟನೆಯಾಗಿರುವ ಸೀಮಾಂತ್ ಲೋಕ ಸಂಘಟನ್ ಪ್ರಕಾರ, ಕೇಂದ್ರ ಸರಕಾರ ಪೌರತ್ವ ನೀಡುವುದಾಗಿ ಹೇಳಿದೆ. ಆದರೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಈ ಸಂಬಂಧ ಯಾವುದೇ ಸಂವಹನ ನಡೆದಿಲ್ಲ. ಅಥವಾ ಕೇಂದ್ರ ರಾಜ್ಯಗಳ ಸಂವಹನ ತೃಪ್ತಿಕರವಾಗಿಲ್ಲ. ಹೀಗಾಗಿ ತಮಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಭಾರತಕ್ಕೆ ಬಂದ ನಿರಾಶ್ರಿತರು ತುಂಬ ಬೇಸರಪಟ್ಟುಕೊಂಡಿದ್ದಾರೆ. ಬಂದಿರುವ ನಿರಾಶ್ರಿತರು ತುಂಬಾ ಬಡವರು, ಅವರಿಗೆ ಪೌರತ್ವ ಪಡೆಯುವ ಪ್ರಕ್ರಿಯೆಗಾಗಿ ದುಡ್ಡು ವೆಚ್ಚ ಮಾಡುವ ತಾಕತ್ತು ಇಲ್ಲ. ಹೆಚ್ಚಿನವರಿಗೆ ಅವರಿಗೆ ಜ್ಞಾನವೂ ಇಲ್ಲ, ಅರಿವೂ ಇಲ್ಲ.
ಈ ರೀತಿ ಭಾರತದ ಪೌರತ್ವ ಬಯಸಿ ಬಂದ ಸುಮಾರು ೨೫೦೦೦ ಮಂದಿ ಹಿಂದೂಗಳು ಕಷ್ಟದಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರೇ ಆದರೂ ಹೇಗೋ ಮಾಡಿ ಹಣ ಹೊಂದಿಸಿಕೊಂಡಿದ್ರು. ಆದರೆ, ಅದರಲ್ಲಿ ಬಹುಪಾಲು ಪೌರತ್ವದ ಕೆಲವು ಪ್ರಕ್ರಿಯೆ ಮುಗಿಸುವ ಹಂತದಲ್ಲೇ ಖಾಲಿಯಾಗಿದೆ. ಇಷ್ಟಾದರೂ ಪೌರತ್ವ ಸಿಗುವುದು ಅವರಿಗೆ ಖಾತ್ರಿಯಾಗಿಲ್ಲ. ಹೀಗಾಗಿ ಅವರಿಗೆ ಪಾಕಿಸ್ತಾನಕ್ಕೆ ಮರಳದೆ ಬೇರೆ ದಾರಿ ಇಲ್ಲ ಎನ್ನುವುದು ಸಂಘಟನೆಯ ಅಭಿಮತ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು ೨೦೦೦ದಷ್ಟು ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವವನ್ನು ನೀಡಲಾಗಿದೆ. ಭಾರತದ ಗೃಹ ಸಚಿವಾಲಯದ ನಿಯಮಗಳ ಪ್ರಕಾರ, ಅವರು ಮೊದಲು ಅವರು ಪಾಕಿಸ್ತಾನದ ಪಾಸ್‌ಪೋರ್ಟನ್ನು ಪಾಕಿಸ್ತಾನಿ ರಾಯಭಾರ ಕಚೇರಿಯಲ್ಲಿ ಸರಂಡರ್ ಮಾಡಬೇಕು ಮತ್ತು ಹಾಗೆ ಸಲ್ಲಿಸಿದ ಬಗ್ಗೆ ಒಂದು ಪ್ರಮಾಣಪತ್ರವನ್ನು ಹೊಂದಿರಬೇಕು. ಜತೆಗೆ ಪಾಕಿಸ್ತಾನಿ ಪಾಸ್‌ಪೋರ್ಟ್‌ನ್ನು ನವೀಕರಣಗೊಳಿಸಬೇಕು. ಈ ಪ್ರಕ್ರಿಯೆಗೆ ೮,೦೦೦ ರೂ.ನಿಂದ ೧೫೦೦೦ ರೂ.ವರೆಗೆ ಖರ್ಚಾಗುತ್ತದೆ. ಇದು ಪಾಕಿಸ್ತಾನಿ ನಿರಾಶ್ರಿತರಿಗೆ ಭಾರವಾಗುತ್ತಿದೆ. ಹಾಗಂತ ಕೇಂದ್ರ ಸರಕಾರ ಇದನ್ನು ತಗ್ಗಿಸುವ ಸಾಧ್ಯತೆಗಳು ಸದ್ಯಕ್ಕಿಲ್ಲ.