Site icon Vistara News

Kartavyapath | ಅತ್ಯಾಕರ್ಷಕ ಕರ್ತವ್ಯಪಥಕ್ಕೆ ಒಂದೇ ದಿನ 150,000 ಜನರು ಭೇಟಿ!

Kartvyapath

ನವ ದೆಹಲಿ: ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ನವೀಕೃತ ಕರ್ತವ್ಯಪಥ (ಈ ಮೊದಲು ರಾಜಪಥ)ವನ್ನು ನೋಡಲು ವೀಕೆಂಡ್‌ನಲ್ಲಿ ಜನರು ಧಾವಿಸುತ್ತಿದ್ದಾರೆ. ಶನಿವಾರ ಕರ್ತವ್ಯಪಥ(Kartavyapath)ಕ್ಕೆ ಅಂದಾಜು 150,000 ಜನರು ಭೇಟಿ ನೀಡಿದ್ದಾರೆ. ಈ ಪೈಕಿ 40 ಸಾವಿರ ಜನರು ಸಂಜೆ ಹೊತ್ತಿನಲ್ಲಿ ಆಗಮಿಸಿದ್ದಾರೆ. ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ಸುಭಾಶ್ ಚಂದ್ರ ಬೋಸ್ ಪ್ರತಿಮೆ ಮತ್ತು ಡ್ರೋನ್ ಶೋ ಅನ್ನು ಜನರು ಕಣ್ಣುತುಂಬಿಕೊಂಡಿದ್ದಾರೆ.

ಕಳೆದ 19 ತಿಂಗಳಿಂದ ಈ ಕರ್ತವ್ಯಪಥದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಪ್ರಾಜೆಕ್ಟ್‌ನ ಭಾಗವಾಗಿ ಸೆಂಟ್ರಲ್ ವಿಸ್ಟಾ ಅವೆನ್ಯೂ (ಕರ್ತವ್ಯ ಪಥ)ವನ್ನು ಅಭಿವೃದ್ಧಿಪಡಿಸಲಾಗಿದ್ದು, ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವೀಕೆಂಡ್‌ನಲ್ಲಿ ದಿಲ್ಲಿ ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು, ಸಂಜೆ ನಡೆಯುವ ಡ್ರೋನ್ ಶೋ ವೀಕ್ಷಿಸಬೇಕು ಮತ್ತು ಸೆಲ್ಫಿಗಳನ್ನು #Kartvyapath ಹ್ಯಾಷ್‌ಟ್ಯಾಗ್‌‌ನಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಬೇಕೆಂದು ಕರೆ ನೀಡಿದ್ದರು.

ಕರ್ತವ್ಯಪಥಕ್ಕೆ ಆಗಮಿಸಿದ ಜನರು ಬಹಳ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್ ಪೂರ್ವ ಇಲ್ಲಿಗೆ ಆಗಮಿಸಿ, ವೀಕೆಂಡ್ ಕಳೆಯುತ್ತಿದ್ದೆವು. ಆದರೆ, ಲಾಕ್‌ಡೌನ್‌ನಿಂದ ಸಾಧ್ಯವಾಗಿರಲಿಲ್ಲ. ಬಳಿಕ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. ಈಗ ಹೊಸದಾಗಿರುವ ಕರ್ತವ್ಯಪಥ, ಇಂಡಿಯಾ ಗೇಟ್ ನೋಡುವುದೇ ಚೆಂದ ಎಂದ ಜನರು ಹೇಳುತ್ತಿದ್ದಾರೆ. ಬಹಳಷ್ಟು ಜನರು ರಾತ್ರಿ ನಡೆಯುವ ಡ್ರೋನ್ ಶೋವನ್ನು ಇಷ್ಟಪಟ್ಟಿದ್ದಾರೆ.

ಶನಿವಾರ ಒಂದೂವರೆ ಲಕ್ಷದಷ್ಟು ಜನರು ಭೇಟಿ ನೀಡಿದ್ದರೂ ಟ್ರಾಫಿಕ್ ಜಾಮ್ ಆಗಲಿಲ್ಲ. ಇಂಡಿಯಾ ಗೇಟ್‌ ಮುಂದೆ ಹಾದು ಹೋಗಲು ಅವಕಾಶವಿರಲಿಲ್ಲ. ಬದಲಿಗೆ ಇದಕ್ಕಾಗಿ ಅಂಡರ್‌ಪಾಸ್ ಬಳಸಿದ್ದರಿಂದ ಟ್ರಾಫಿಕ್ ಜಾಮ್ ಕಂಡು ಬರಲಿಲ್ಲ. ಜತೆಗೆ, 400 ಸೆಕ್ಯುರಿಟಿ ಗಾರ್ಡ್ಸ್ ಮತ್ತು ಟ್ರಾಫಿಕ್ ಪೊಲೀಸರು, ಸಂಚಾರ ಸುಗಮಕ್ಕೆ ನಿರತರಾಗಿದ್ದರು. ಆದರೆ, ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಒಂದಿಷ್ಟು ಗೊಂದಲ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬಹಳಷ್ಟು ಜನರು ತಮ್ಮ ಸ್ವಂತ ವೆಹಿಕಲ್‌ಗಳಲ್ಲಿ ಬಂದಿದ್ದರು.

ಇದನ್ನೂ ಓದಿ | Kartavyapath | ಸದ್ದಿಲ್ಲದೇ ಬೆಳಗುತ್ತಿದೆ ಸಾಂಸ್ಕೃತಿಕ ಮೂಲಸೌಕರ್ಯ: ಪ್ರಧಾನಿ ಮೋದಿ ಹೆಮ್ಮೆಯ ನುಡಿ

Exit mobile version