ಗಾಜಿಯಾಬಾದ್: ವಾರಾಣಸಿ ದೇವಾಲಯದಲ್ಲಿ ಹಾಗೂ ರೈಲ್ವೆ ನಿಲ್ದಾಣದಲ್ಲಿ ಸರಣಿ ಸ್ಫೋಟ ಸಂಭವಿಸಿ 16 ವರ್ಷಗಳ ಬಳಿಕ ಕೊನೆಗೂ ಉಗ್ರ ವಲಿವುಲ್ಲಾ ಖಾನ್ ತಪ್ಪಿತಸ್ಥ ಎಂದು ಗಾಜಿಯಾಬಾದ್ ಕೋರ್ಟ್ ಶನಿವಾರ ತೀರ್ಪು ಕೊಟ್ಟಿದೆ. ಶಿಕ್ಷೆಯ ಪ್ರಮಾಣ ಜೂನ್ 6ಕ್ಕೆ ಪ್ರಕಟವಾಗಲಿದೆ.
ವಾರಾಣಸಿಯ ಸಂಕಟ ಮೋಚನ ದೇವಾಲಯದಲ್ಲಿ 2006ರಲ್ಲಿ ಸ್ಫೋಟ ಸಂಭವಿಸಿತ್ತು. ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣದಲ್ಲೂ ಸ್ಫೋಟವಾಗಿತ್ತು. 20 ಮಂದಿ ಸಾವಿಗೀಡಾಗಿದ್ದರು. ನೂರಾರು ಜನ ಗಾಯಗೊಂಡಿದ್ದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿತೇಂದ್ರ ಕುಮಾರ್, ವಲಿವುಲ್ಲಾ ಖಾನ್ ಎರಡು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ಪ್ರಕಟಿಸಿದರು. ಮತ್ತೊಂದು ಪ್ರಕರಣದಲ್ಲಿ ಈತನನ್ನು ದೋಷಮುಕ್ತಗೊಳಿಸಲಾಗಿದೆ.
ಸಂಕಟ ಮೋಚನ ದೇವಾಲಯದಲ್ಲಿ 2006ರ ಮಾರ್ಚ್ 7ರಂದು ಸಂಜೆ 6.15ಕ್ಕೆ ಸ್ಫೋಟ ಸಂಭವಿಸಿತ್ತು. ಇದಾದ 15 ನಿಮಿಷಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟವಾಗಿತ್ತು. ಒಟ್ಟು 121 ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
2006ರ ಏಪ್ರಿಲ್ ನಲ್ಲಿ ವಿಶೇಷ ಕಾರ್ಯಪಡೆಯನ್ನು ರಷಿಸಲಾಗಿತ್ತು. ಇದು ಘಟನೆಯ ತನಿಖೆ ನಡೆಸಿತ್ತು. ವಲಿವುಲ್ಲಾ ಖಾನ್ ಬಾಂಗ್ಲಾದೇಶದ ಹರ್ಕತ್ ಜಿಹಾದ್ ಇಸ್ಲಾಮಿ ಎಂಬ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.