Site icon Vistara News

Year End 2022 | ಕಾಶ್ಮೀರದಾದ್ಯಂತ 2022ರಲ್ಲಿ 172 ಉಗ್ರರ ಹತ್ಯೆ, ಪಂಡಿತರು ಸೇರಿ 29 ನಾಗರಿಕರ ಬಲಿ

Rajouri Terror Attack

ಶ್ರೀನಗರ: ಕೆಲವೇ ಗಂಟೆಗಳಲ್ಲಿ ಜಗತ್ತು ಹೊಸ ವರ್ಷಕ್ಕೆ (Year End 2022) ಕಾಲಿಡಲಿದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯು 2022ರಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಕಾರ್ಯಾಚರಣೆ ಕೈಗೊಂಡು ಉಗ್ರರನ್ನು ಹತ್ಯೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಗ್ರರನ್ನು ಹೊಡೆದುರುಳಿಸುವ ವಿಚಾರದಲ್ಲಿ 2022 ಯಶಸ್ವಿ ವರ್ಷ ಎಂದು ಹೇಳಿದ್ದಾರೆ.

“ಜಮ್ಮು-ಕಾಶ್ಮೀರದಾದ್ಯಂತ 2022ರಲ್ಲಿ ಭದ್ರತಾ ಸಿಬ್ಬಂದಿಯು 93 ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡು 172 ಉಗ್ರರನ್ನು ಎನ್‌ಕೌಂಟರ್‌ ಮಾಡಿದೆ. ಇವರಲ್ಲಿ 42 ಉಗ್ರರು ವಿದೇಶದವರಾಗಿದ್ದಾರೆ. ಲಷ್ಕರೆ ತಯ್ಬಾ, ಇದರ ಅಂಗಸಂಸ್ಥೆ ದಿ ರೆಸಿಸ್ಟಂಟ್‌ ಫ್ರಂಟ್‌ನ 108, ಜೈಶೆ ಮೊಹಮ್ಮದ್‌ 35, ಹಿಜ್ಬುಲ್‌ ಮುಜಾಹಿದ್ದೀನ್‌ 22, ಅಲ್‌-ಬದ್ರ್‌ ಉಗ್ರ ಸಂಘಟನೆಯ ನಾಲ್ಕು ಉಗ್ರರನ್ನು ಒಳಗೊಂಡು 172 ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಕಾಶ್ಮೀರ ಎಡಿಜಿಪಿ ವಿಜಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಹೊಸ ಉಗ್ರರಿಗಿಲ್ಲ ಉಳಿಗಾಲ
“ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರುವವರ ಜೀವಿತಾವಧಿಯನ್ನೇ ಭದ್ರತಾ ಸಿಬ್ಬಂದಿ ಇಳಿಕೆ ಮಾಡಿದ್ದಾರೆ. ಉಗ್ರ ಸಂಘಟನೆಗೆ ಸೇರಿದ ಒಂದೇ ತಿಂಗಳಲ್ಲಿ ಹತ್ಯೆಗೀಡಾದ ಉಗ್ರರ ಪ್ರಮಾಣ ಶೇ.89ರಷ್ಟಿದೆ. ಒಂದು ವರ್ಷದಲ್ಲಿ 100 ಯುವಕರು ಉಗ್ರ ಸಂಘಟನೆ ಸೇರಿದ್ದು, 2021ಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.37ರಷ್ಟು ಕುಸಿತವಾಗಿದೆ” ಎಂದು ತಿಳಿಸಿದ್ದಾರೆ.

6 ಹಿಂದುಗಳು ಸೇರಿ 21 ಸ್ಥಳೀಯರ ಹತ್ಯೆ
“ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಗಳಲ್ಲಿ 2022ರಲ್ಲಿ ಆರು ಹಿಂದುಗಳು ಸೇರಿ 21 ಸ್ಥಳೀಯರು ಹತರಾಗಿದ್ದಾರೆ. ಇವರಲ್ಲಿ ಮೂವರು ಕಾಶ್ಮೀರಿ ಪಂಡಿತರಾಗಿದ್ದಾರೆ. ಎಂಟು ಜನ ಬೇರೆ ರಾಜ್ಯದವರನ್ನು ಸೇರಿಸಿದರೆ ಒಂದು ವರ್ಷದಲ್ಲಿ 29 ನಾಗರಿಕರ ಹತ್ಯೆಯಾದಂತಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ | Terrorists Killed | ಜಮ್ಮುವಿನಲ್ಲಿ ನಾಲ್ವರು ಉಗ್ರರ ಹತ್ಯೆ; ಭದ್ರತಾ ಪಡೆ ಗುಂಡಿನ ದಾಳಿಗೆ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್​

Exit mobile version