ನವ ದೆಹಲಿ: ಇಂಡಿಯನ್ ರೈಲ್ವೆಯಲ್ಲಿ ನೀವು ದುಬಾರಿ ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ್ದೀರಾ? ಹೆಚ್ಚೆಂದರೆ ಎಷ್ಟಿರಬಹುದು? 5000, 10000 ರೂ.? ಇದಕ್ಕಿಂತಲೂ ಹೆಚ್ಚಿನ ದುಬಾರಿ ದರದ ವಿಲಾಸಿ ಪ್ರಯಾಣ ನೀವು ಮಾಡಿರಲಾರಿರಿ. ಆದರೆ ಇಲ್ಲಿ ನೋಡಿ, ಲಕ್ಷಾಂತರ ರೂಪಾಯಿ ದರ ನೀಡಿ ಪ್ರಯಾಣಿಸುವ ಐಷಾರಾಮಿ ಕೋಚ್. ಇದರ ಬೆಲೆ ಕೇಳಿದರೆ, ಇದರಲ್ಲಿ ಏನಿದೆ ಎಂದು ತಿಳಿದರೆ ನೀವು ನಿಬ್ಬೆರಗಾಗಬಹುದು.
ಹೌದು, ಇದು ಇಂಡಿಯನ್ ರೈಲ್ವೆಯ ʻದಿ ಮಹಾರಾಜ ಎಕ್ಸ್‌ಪ್ರೆಸ್ʼ ಟ್ರೇನಿನ ಐಷಾರಾಮಿ ಕೋಚ್. ಕುಶಾಗ್ರ ಎಂಬವರು ಇನ್‌ಸ್ಟಾಗ್ರಾಂನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಇದು ನಾಲ್ಕು ರೂಟ್‌ಗಳಲ್ಲಿ ಸಂಚರಿಸುತ್ತದೆ. ಈಶಾನ್ಯ ಭಾರತ, ಮಧ್ಯ ಭಾರತ, ಮುಖ್ಯವಾಗಿ ರಾಜಸ್ಥಾನದಲ್ಲಿ ಸಂಚರಿಸುತ್ತದೆ.
ಟಿಕೆಟ್ ಬೆಲೆ ಎಷ್ಟು ಅಂತ ಕೇಳ್ತೀರಾ? ಇದರ ಅತ್ಯಂತ ದುಬಾರಿ ಟಿಕೆಟ್ ಬೆಲೆ 19,90,800 ರೂ. ಅದೂ ಜಿಎಸ್‌ಟಿ ಹೊರತುಪಡಿಸಿ! ಇಷ್ಟ ನೀಡಿ ಪ್ರಯಾಣಿಸುವ ಶ್ರೀಮಂತರು ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ.
ಕುಶಾಗ್ರ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ದುಬಾರಿ ದರ ನೀಡಿ ಪ್ರಯಾಣಿಸುವವರು ಪಡೆಯಬಹುದಾದ ಕೋಚ್‌ನ ಸೌಲಭ್ಯಗಳನ್ನು ಕಾಣಿಸಲಾಗಿದೆ. ಇದು ಪ್ರೆಸಿಡೆನ್ಷಿಯಲ್ ಸೂಟ್. ಇದರಲ್ಲಿ ವಿಲಾಸಿ ಸೋಫಾಗಳಿರುವ ಲಿವಿಂಗ್ ರೂಂ, ಸ್ಟಡಿ ಟೇಬಲ್, ಚೇರ್ ಟೇಬಲ್, ಎರಡು ಬೆಡ್‌ರೂಮುಗಳು, ಒಂದು ಮಾಸ್ಟರ್ ಬೆಡ್‌ರೂಂ, ಅದರಲ್ಲಿ ಡಬಲ್ ಬೆಡ್ಡು, ಇನ್ನೆರಡು ಸಿಂಗಲ್ ಬೆಡ್ಡು, ಫಳಫಳಿಸುವ ಅಟ್ಯಾಚ್ ಟಾಯ್ಲೆಟ್ಟು- ಬಾತ್‌ರೂಮುಗಳಿವೆ. ಇಲ್ಲಿ ಒಂದು ಸೂಟ್ ಒಂದು ಬೋಗಿಯನ್ನಿಡೀ ಆಕ್ರಮಿಸಿದೆ. ಕೈಕಾಲಿಗೆ ಸರ್ವ್ ಮಾಡುವ ಆಳುಕಾಳುಗಳು, ವೈಭವಪೂರಿತವಾದ ಹೋಟೆಲ್, ಬಾರ್ ಸೌಲಭ್ಯ ಕೂಡ ಇದೆ.
ಇದನ್ನು ನೋಡಿದ ವ್ಯೂವರ್ಸ್ ಮಾಡಿದ ಕಮೆಂಟ್‌ಗಳೂ ಮಜವಾಗಿವೆ. ʼʼಈ ದುಡ್ಡಿನಲ್ಲಿ ನಾನು ಫಸ್ಟ್ ಕ್ಲಾಸ್ ರೈಲಿನಲ್ಲಿ ಜಗತ್ತನ್ನಿಡೀ ಸುತ್ತಾಡಿ ಬರುತ್ತೇನೆʼʼ ಎಂದು ಒಬ್ಬರು ಹೇಳಿದ್ದರೆ, ʼʼಈ ದುಡ್ಡಿನಲ್ಲಿ ಪ್ರಯಾಣ ಮಾಡುವುದಕ್ಕಿಂತ, ಖರೀದಿಸಲು ಒಂದು ಒಳ್ಳೆಯ ಆಸ್ತಿಯೇ ಬರುತ್ತದೆ. ಅದರಲ್ಲಿ ಇಷ್ಟೇ ಸೌಲಭ್ಯ ಹಾಗೂ ಇದಕ್ಕಿಂತ ಹೆಚ್ಚಿನ ಜಾಗವೂ ಇರುತ್ತದೆʼʼ ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ.