ಪಟನಾ: ಬಿಹಾರದಲ್ಲಿ (Bihar) ಕಳಪೆ ಕಾಮಗಾರಿಗಳು, ಸರ್ಕಾರದ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಲೇ ಇವೆ. ಅದರಲ್ಲೂ, ಕಳೆದ ಕೆಲ ದಿನಗಳಲ್ಲಿ ಸಾಲು ಸಾಲು ನಿರ್ಮಾಣ ಹಂತದ ಸೇತುವೆಗಳು ಕುಸಿಯುತ್ತಿರುವುದು (Bridge Collapse) ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬುಧವಾರ (ಜುಲೈ 3) ಸಿವಾನ್ ಜಿಲ್ಲೆಯೊಂದರಲ್ಲಿಯೇ (Siwan District) ಎರಡು ಸೇತುವೆಗಳು ಕುಸಿದಿದ್ದು, ಕಳೆದ ಎರಡು ವಾರಗಳಲ್ಲಿಯೇ ಒಟ್ಟು 7 ಸೇತುವೆಗಳು ಕುಸಿದಂತಾಗಿದೆ. ಇದರಿಂದಾಗಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಬಿಹಾರದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸಿವಾನ್ ಜಿಲ್ಲೆಯಲ್ಲಿ ಬುಧವಾರ ಸುಮಾರು 35 ವರ್ಷಗಳಷ್ಟು ಹಳೆಯದಾದ ಸೇತುವೆಗಳು ಕುಸಿದಿವೆ. ದಿಯೋರಿಯಾ ಬ್ಲಾಕ್‌ನಲ್ಲಿ ಸೇತುವೆಗಳು ಕುಸಿದಿದ್ದು, ಯಾವುದೇ ಪ್ರಾಣಾಪಾಯ, ಜನರಿಗೆ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ಮಹಾರಾಜ್‌ಗಂಜ್ ಸೇರಿ ಹಲವು ಗ್ರಾಮಗಳಿಗೆ ಸೇತುವೆಗಳು ಸಂಪರ್ಕ ಒದಗಿಸುತ್ತಿದ್ದವು. ಈಗ ಸೇತುವೆಗಳು ಕುಸಿದ ಕಾರಣ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
#BREAKING : Another bridge collapses in Bihar, this time in Siwan, 7 such incident in 15 days.
— upuknews (@upuknews1) July 3, 2024
The small bridge, situated in the district's Deoria block, connects several villages with Mahrajganj. No casualties have been reported so far#Bihar #Siwan #BridgeCollapse… pic.twitter.com/87hKQ9Vw4M
ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಸೇತುವೆ ಕುಸಿತದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಜೂನ್ 28ರಂದು ಮಧುಬನಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿತ್ತು. ಇದಕ್ಕೂ ಒಂದು ದಿನ ಮೊದಲೇ ಅಂದರೆ ಜೂನ್ 27ರಂದು ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿತ್ತು. ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಜೂನ್ 22ರಂದು ಕೂಡ ಸಿವಾನ್ ಜಿಲ್ಲೆಯಲ್ಲಿ ಸೇತುವೆ ಕುಸಿದಿತ್ತು. ಜೂನ್ 19ರಂದೂ ಅರಾತಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಧರೆಗುರುಳಿತ್ತು.
ಬಿಹಾರ ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಸೇತುವೆಗಳು ಕುಸಿಯುತ್ತಿರುವುದಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸುದ್ದಿಯಾಗುತ್ತಲೇ ಇವೆ. ಕಳೆದ 9 ದಿನಗಳಲ್ಲಿಯೇ ಇಂತಹ 5 ಪ್ರಕರಣಗಳು ಬೆಳಕಿಗೆ ಬಂದಿವೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಸೇತುವೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನರ ದುಡ್ಡು ಹೀಗೆ ನೀರು ಪಾಲಾಗುತ್ತಿದ್ದರೂ ಮುಖ್ಯಮಂತ್ರಿಯು ಗಾಢ ನಿದ್ದೆಯಲ್ಲಿದ್ದಾರೆ” ಎಂಬುದಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: Bridge Collapse: ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿತ; 9 ದಿನದಲ್ಲಿ 5ನೇ ಪ್ರಕರಣ!