Site icon Vistara News

ಪ್ರವಾದಿ ಅವಹೇಳನ ವಿವಾದ| ರಾಂಚಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಗುಂಡಿಗೆ ಬಲಿ

ರಾಂಚಿ: ಪ್ರವಾದಿ ಮಹಮ್ಮದ್‌ ಅವರನ್ನು ಅವಹೇಳನ ಮಾಡಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಭುಗಿಲೆದ್ದಿರುವ ಪ್ರತಿಭಟನೆ ಇಬ್ಬರನ್ನು ಬಲಿ ಪಡೆದಿದೆ. ರಾಂಚಿಯಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಅದರಲ್ಲಿ ಗಾಯಗೊಂಡಿದ್ದ ಇಬ್ಬರು ಬಳಿಕ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಶುಕ್ರವಾರ ಪ್ರಾರ್ಥನೆ ಮುಗಿದ ಬಳಿಕ ದೇಶದ ನಾನಾ ಕಡೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು. ದಿಲ್ಲಿ, ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ರಾಂಚಿ ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲಿ ಸಾವಿರಾರು ಮುಸ್ಲಿಮರು ಶುಕ್ರವಾರ ಸಂಜೆ ಪ್ರತಿಭಟನೆ ಆರಂಭಿಸಿದ್ದರು. ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆ ನಿಯಂತ್ರಣ ತಪ್ಪಿ ಹಿಂಸಾಚಾರಕ್ಕೆ ಬದಲಾಗಿತ್ತು. ಹನುಮಾನ್‌ ಮಂದಿರದ ಬಳಿ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಜನರನ್ನು ಚದುರಿಸುವ ಪ್ರಯತ್ನಕ್ಕಿಳಿದಾಗ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ. ಶಾಂತಿಯುತವಾದ ಪ್ರತಿಭಟನೆ ಹಿಂಸಾಚಾರಕ್ಕೆ ಬದಲಾದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು.

ರಾಂಚಿಯ ಮುಸ್ಲಿಮರ ಎರಡು ಗುಂಪು ಶುಕ್ರವಾರದ ಪ್ರಾರ್ಥನೆಯ ಬಳಿಕ ಎರಡು ಭಾಗಗಳಲ್ಲಿ ಪ್ರತಿಭಟನೆ ನಡೆಸಿತ್ತು. ಒಂದು ಗುಂಪು ದೊರಂದ ರಸ್ಲದರ್ಬಾಬ ಮಝರ್‌ ಸಮೀಪ ಮೆರವಣಿಗೆ ನಡೆಸಿದರೆ ಮತ್ತೊಂದು ಗುಂಪು ಇಕ್ರಾ ಮಸೀದಿ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿತು. ಇದು ಹನುಮಾನ್‌ ಮಂದಿರದವರೆಗೂ ಮುಂದುವರಿಯಿತು. ಅಲ್ಲಿ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮೊದಲು ಲಾಠೀ ಚಾರ್ಜ್‌ ಮಾಡಿದರು. ಅದಾಗ್ಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು.

ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಿನ ಸೆಣಸಾಟದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿ ಸುರೇಂದ್ರ ಕುಮಾರ್‌ ಝಾ ಸೇರಿದಂತೆ ಅನೇಕ ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಹಾಗೂ ಪಶ್ಚಿಮ ಬಂಗಾಳದ ಹೌರಾದಲ್ಲಿ ಕೂಡ ಪ್ರತಿಭಟನೆ ಹಿಂಸಾಚಾರಕ್ಕೆ ಮಾರ್ಪಟ್ಟಿದೆ. ಹೌರಾ, ರಾಂಚಿ ಸೇರಿದಂತೆ ಹಲವು ಪ್ರದೇಶದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿಯಲ್ಲಿ‌ ಮುಸ್ಲಿಂ ಮುಖಂಡ ಶಾಹಿ ಇಮಾಮ್ ಸಾಮರಸ್ಯಕ್ಕೆ ಕರೆನೀಡಿದ್ದಾರೆ. ಮುಸ್ಲೀಂ ಚಿಂತಕರು ಯಾರೂ ಈ ಪ್ರಕರನದ ಬಗ್ಗೆ ಟಿವಿ ಮಾಧ್ಯಮಗಳ ಚರ್ಚೆಗೆ ಭಾಗಿಯಾಗದಂತೆ ಅಖಿಲ ಭಾರತ ಮುಸ್ಲಿಂ ಸಂಘಟನೆಯ ನ್ಯಾಯಾಂಗ ಮಂಡಳಿ ಮನವಿ ಹೊರಡಿಸಿದೆ.

ಇದನ್ನೂ ಓದಿ: ನೂಪುರ್‌ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು

Exit mobile version