ನವ ದೆಹಲಿ: ಭೂಮಿಯ ಮೇಲೆ ಇರುವೆ(Ants)ಗಳ ಸಂಖ್ಯೆ ಎಷ್ಟು? ಇಂಥದೊಂದು ಪ್ರಶ್ನೆ ಇಟ್ಟುಕೊಂಡು ವಿಲಕ್ಷಣ ಅಧ್ಯಯನ ಕೈಗೊಂಡು, ಒಂದು ಅಂದಾಜು ಉತ್ತರವನ್ನು ಕಂಡುಕೊಳ್ಳಲಾಗಿದೆ. ಅಂದರೆ ಭೂಮಿ ಮೇಲೆ ಸುಮಾರು 20 ಕ್ವಾಡ್ರಿಲಿಯನ್ ಅಂದರೆ, 20 ಸಾವಿರ ಲಕ್ಷ ಕೋಟಿ ಇರುವೆಗಳಿವೆ! ಅಂದರೆ, ನೀವೇನಾದರೂ ಅಂಕಿಗಳಲ್ಲಿ ಇದನ್ನು ಬರೆದರೆ ಇಷ್ಟಾಗುತ್ತದೆ ನೋಡಿ-20,000,000,000,000,000! ಅಬ್ಬಾ ಈ ಸಂಖ್ಯೆಯೇ ಭಯಾನಕ ಆಗಿದೆಯಲ್ಲವೇ? !
ಇನ್ನೂ ಹುಬ್ಬೇರಿಸುವ ಸಂಗತಿಯೊಂದಿದೆ. ಜಗತ್ತಿನ ಎಲ್ಲ ಇರುವೆಗಳು ಸೇರಿ 12 ಮಿಲಿಯನ್ ಡ್ರೈ ಕಾರ್ಬನ್ ರೂಪಿಸುತ್ತವೆಯಂತೆ. ಜಗತ್ತಿನ ಎಲ್ಲ ಪಕ್ಷಿಗಳು ಮತ್ತು ವನ್ಯ ಪ್ರಾಣಿಗಳಿಗಿಂತಲೂ ಇದು ಹೆಚ್ಚು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಒಟ್ಟು ಮಾನವರ ತೂಕದ ಪೈಕಿ ಒಂದು ಐದರಷ್ಟು ಇರುವೆಗಳ ಡ್ರೈ ಕಾರ್ಬನ್ ತೂಗುತ್ತದೆ.
ಡಾ. ಶುಲ್ತೀಸ್ ಮತ್ತು ಅವರ ಸಹೋದ್ಯೋಗಿಗಳು ಈ ಇರುವೆಗಳ ಅಂದಾಜು ಸಂಖ್ಯೆಯನ್ನು ಕಂಡು ಹಿಡಿದಿದ್ದಾರೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆರ್ಚೀವ್ಸ್‌ನಲ್ಲಿ ಇದಕ್ಕೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಲಾಗಿದೆ.
15,700 ಕ್ಕೂ ಹೆಚ್ಚು ಹೆಸರಿಸಲಾದ ಇರುವೆ ಜಾತಿಗಳು ಮತ್ತು ಉಪಜಾತಿಗಳಿವೆ. ಇನ್ನೂ ಅನೇಕ ಇರುವೆಗಳಿಗೆ ವಿಜ್ಞಾನದಿಂದ ಹೆಸರಿಸಲು ಸಾಧ್ಯವಾಗಿಲ್ಲ. ಇರುವೆಗಳ ಉನ್ನತ ಮಟ್ಟದ ಸಾಮಾಜಿಕ ಸಂಘಟನೆಯು ಜಗತ್ತಿನಾದ್ಯಂತ ಬಹುತೇಕ ಎಲ್ಲಾ ಪರಿಸರ ವ್ಯವಸ್ಥೆಗಳು ಮತ್ತು ಪ್ರದೇಶಗಳನ್ನು ವಸಾಹತುವನ್ನಾಗಿ ಮಾಡಲು ಅನುವು ಮಾಡಿಕೊಟ್ಟಿದೆ.
ಈ ಸಂಶೋಧನೆಯು ಪ್ರಪಂಚದಾದ್ಯಂತದ ಸಹ ವಿಜ್ಞಾನಿಗಳು ನಡೆಸಿದ ಇರುವೆಗಳ ಜನಸಂಖ್ಯೆಯ 489 ಅಧ್ಯಯನಗಳ ವಿಶ್ಲೇಷಣೆಯನ್ನು ಒಳಗೊಂಡಿತ್ತು. ಇಂಗ್ಲಿಷ್ ಮಾತ್ರವಲ್ಲದೇ ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಪೋರ್ಚುಗೀಸ್‌ನಂತಹ ಭಾಷೆಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ.
ಜಗತ್ತಿನ ಎಲ್ಲ ಖಂಡಗಳು ಸಮೀಕ್ಷೆಯ ಭಾಗವಾಗಿವೆ. ಅರಣ್ಯಗಳು, ಮರಭೂಮಿಗಳು, ಹುಲ್ಲುಗಾವಲುಗಳು, ನಗರಗಳು ಸೇರಿದಂತೆ ಎಲ್ಲ ರೀತಿಯ ಪ್ರದೇಶಗಳನ್ನು ಬಳಸಿಕೊಳ್ಳಲಾಗಿದೆ. ಇರುವೆಗಳ ಸಂಖ್ಯೆಯನ್ನು ಕಂಡುಕೊಳ್ಳಲು ಪಿಟ್ಫಾಲ್ ಟ್ರ್ಯಾಪ್ ಮತ್ತು ಕಸದ ಮಾದರಿಗಳನ್ನು ಬಳಸಿಕೊಳ್ಳಲಾಗಿದೆ. ಇಷ್ಟೆಲ್ಲ ಸರ್ಕಸ್ ಮಾಡಿದ ಬಳಿಕ ಭೂಮಿಯ ಮೇಲೆ ಸುಮಾರು 20 ಕ್ವಾಡ್ರಿಲಿಯನ್ ಇರುವೆಗಳು ಇರಬಹುದು ಎಂದು ಸಂಶೋಧನಾ ತಂಡವು ಅಂದಾಜಿಸಿದೆ. ಇದು ಈ ಹಿಂದಿನ ಅಂದಾಜುಗಳಿಗಿಂತಲೂ 20 ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ | ಅಮೆಜಾನ್ ಕಾಡಿನ ಹುಡುಗರಿಗೆ ಇರುವೆಯಿಂದ ಕಚ್ಚಿಸಿಕೊಳ್ಳುವುದೂ ಒಂದು ಪರೀಕ್ಷೆ!