Site icon Vistara News

ಗುಜರಾತ್‌ ಗಲಭೆ: ಮೋದಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿದ್ದನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್‌

ನವ ದೆಹಲಿ: ೨೦೦೨ರ ಗುಜರಾತ್‌ ಗಲಭೆಗೆ (Gujrat Riots) ಸಂಬಂಧಿಸಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಕ್ಲೀನ್‌ ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ದಾವೆಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಗಲಭೆಯಲ್ಲಿ ಮೃತಪಟ್ಟ ಹಿರಿಯ ಕಾಂಗ್ರೆಸ್‌ ನಾಯಕ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಜಖಿಯಾ ಜಾಫ್ರಿ ಅವರು ಸಲ್ಲಿಸಿದ ಅರ್ಜಿಯ ಸಂಬಂಧ ಕೋರ್ಟ್‌ ಈ ತೀರ್ಪು ನೀಡಿದೆ.

೨೦೦೨ರ ಗುಜರಾತ್‌ ಗಲಭೆ ವೇಳೆ ಅಹಮದಾಬಾದ್‌ನ ಗುಲ್ಬರ್ಗ್‌ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ವೇಳೆ ಕಾಂಗ್ರೆಸ್‌ ನಾಯಕ ಎಹ್ಸಾನ್‌ ಜಫ್ರಿ ಅವರು ಮೃತಪಟ್ಟಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಎಸ್‌ಐಟಿ ೨೦೧೨ರ ಫೆಬ್ರವರಿ ೮ರಂದು ವರದಿಯನ್ನು ಸಲ್ಲಿಸಿ, ನರೇಂದ್ರ ಮೋದಿ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಬಹುದಾದ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು.

ಇದನ್ನು ಪ್ರಶ್ನಿಸಿ ಜಕಿಯಾ ಜಫ್ರಿ ಅವರು ಗುಜರಾತ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ ಕೋರ್ಟ್‌ ಜಫ್ರಿ ದಾವೆಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಜಾಫ್ರಿ ಅವರು ಸುಪ್ರೀಂಕೋರ್ಟ್‌ ಮೊರೆ ಹೊಕಿದ್ದರು.

ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆದ ವೇಳೆ ಎಸ್‌ಐಟಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ಈ ಮನವಿಗೆ ಸಂಬಂಧಿಸಿ ಗುಜರಾತ್‌ ಹೈಕೋರ್ಟ್‌ ತೆಗೆದುಕೊಂಡ ತೀರ್ಮಾನವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು. ಇದೀಗ ಶುಕ್ರವಾರ ಸುಪ್ರೀಂಕೋರ್ಟ್‌ ತನ್ನ ಅಂತಿಮ ತೀರ್ಪನ್ನು ನೀಡಿದೆ.

ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ ಎಸ್‌-೬ ಕೋಚ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ೫೯ ಮಂದಿ ಪ್ರಾಣ ಕಳೆದುಕೊಂಡಿದ್ದರು. ಅವರೆಲ್ಲರೂ ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆ ದೊಡ್ಡ ಮಟ್ಟದ ಪ್ರತೀಕಾರಕ್ಕೆ ಹೇತುವಾಯಿತು. ಮರು ದಿನವೇ ಗುಲ್ಬರ್ಗ್‌ ಸೊಸೈಟಿಯಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆದು ೬೮ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ: ಭಾರತ ಈ ವರ್ಷ 7.5% ಬೆಳವಣಿಗೆ, ಅತಿ ವೇಗದ ಆರ್ಥಿಕತೆ: ನರೇಂದ್ರ ಮೋದಿ

Exit mobile version