ನವದೆಹಲಿ: ದೇಶದ ಬಹುತೇಕ ಕಡೆ ಬೇಸಿಗೆ ಅಬ್ಬರ ಹೆಚ್ಚಿದೆ. ಹೊರಗೆ ಹೋಗಲು ಆಗದ, ಮನೆಯಲ್ಲಿ ಕೂತರೂ ಬೆವರುವ ಸ್ಥಿತಿ ಎದುರಾಗಿದೆ. ಮೈ ಎಂಬುದು ಬೆವರಿನ ಕಾರ್ಖಾನೆಯಾಗಿದೆ. ಯಾವಾಗ ಬೇಸಿಗೆ ಮುಗಿಯುತ್ತದೆಯೋ ಎಂದು ಕ್ಯಾಲೆಂಡರ್ ನೋಡುವಂತಾಗಿದೆ. ಮಳೆಗಾಗಿ ಆಕಾಶದತ್ತ ಕಣ್ಣು ಹಾಯಿಸುವಂತಾಗಿದೆ. ಇದರ ಬೆನ್ನಲ್ಲೇ, 2023-2027ರವರೆಗೆ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟು ಹೆಚ್ಚಿನ ತಾಪಮಾನ ಇರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಇದು ಭೀತಿ ಹುಟ್ಟಿಸುವಂತಿದೆ.
“ಹಸಿರುಮನೆ ಅನಿಲ ಪರಿಣಾಮ ಹಾಗೂ ಎಲ್‌ನಿನೋ (ಮಳೆ ಕಡಿಮೆ ಸೂಚನೆ) ಪರಿಣಾಮದಿಂದಾಗಿ ಮುಂದಿನ ಐದು ವರ್ಷ ತಾಪಮಾನ ಹೆಚ್ಚಿರಲಿದೆ. ಜಗತ್ತಿನಾದ್ಯಂತ ಐದು ವರ್ಷದಲ್ಲಿ ಒಮ್ಮೆ ಅಥವಾ ಐದು ವರ್ಷವೂ ಹಿಂದೆಂದೂ ಕಂಡು ಕೇಳರಿಯದಷ್ಟು ತಾಪಮಾನ ಹೆಚ್ಚಿರಲಿದೆ. ಜಾಗತಿಕ ತಾಪಮಾನ ನಿಯಂತ್ರಣದ ಕುರಿತು ಪ್ಯಾರಿಸ್‌ನಲ್ಲಿ ನಡೆದ ಸಭೆಯ ವೇಳೆ ನಿಗದಿಪಡಿಸಿದ ಅಂದಾಜನ್ನು ತಾಪಮಾನದ ಏರಿಕೆಯು ಮೀರಿಸಲಿದೆ” ಎಂದು ವಿಶ್ವಸಂಸ್ಥೆ ಹವಾಮಾನ ಸಂಸ್ಥೆ ತಿಳಿಸಿದೆ.
ಕಳೆದ ಏಳು ವರ್ಷಗಳಲ್ಲಿ 2015 ಹಾಗೂ 2022ಅನ್ನು ಗರಿಷ್ಠ ತಾಪಮಾನ ದಾಖಲಾದ ವರ್ಷ ಎಂದು ಗುರುತಿಸಲಾಗಿದೆ. ಈ ವರ್ಷವೂ ಹೆಚ್ಚಿನ ತಾಪಮಾನ ಇದೆ. ಇದರ ಬೆನ್ನಲ್ಲೇ ಮುಂದಿನ ಐದು ವರ್ಷವೂ ಗರಿಷ್ಠ ತಾಪಮಾನ ಇರುವುದು ಜನರಿಗೆ ಆತಂಕ ಮೂಡಿಸಿದೆ.
ವಿಶ್ವಸಂಸ್ಥೆ ಹವಾಮಾನ ಇಲಾಖೆ ಪ್ರಕಾರ, ಜಾಗತಿಕವಾಗಿ ವಾರ್ಷಿಕ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯ ಸಾಧ್ಯತೆ ಶೇ.66ರಷ್ಟಿದೆ. ಮುಂದಿನ ಐದು ವರ್ಷದಲ್ಲಿ 1.1 ಡಿಗ್ರಿ ಸೆಲ್ಸಿಯಸ್‌ನಿಂದ 1.8 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಿಸಿ ತಾಪಮಾನದ ಅಪಾಯದಲ್ಲಿ ಭಾರತ
ಬೀರುವ ಪರಿಣಾಮ ಏನು?
ಎಲ್‌ನಿನೋ ಪರಿಣಾಮದ ಪ್ರಕಾರ ಮುಂದಿನ ಕೆಲವೇ ತಿಂಗಳುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ತಾಪಮಾನದ ಏರಿಕೆಯಾಗಲಿದೆ. ಐದು ವರ್ಷಗಳವರೆಗೆ ಪರಿಸ್ಥಿತಿ ಹೀಗೆಯೇ ಇದ್ದರೆ ಜನರ ಆರೋಗ್ಯ, ಆಹಾರ ಭದ್ರತೆ, ನೀರಿನ ನಿರ್ವಹಣೆ ಹಾಗೂ ಪರಿಸರದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರಬೇಕು ಎಂದು ಸೂಚಿಸಿದೆ.