Site icon Vistara News

ಪೆಟ್ರೋಲ್‌ಗೆ 200 ರೂ., ಎಟಿಎಂನಲ್ಲಿ ದುಡ್ಡಿಲ್ಲ, ಔಷಧಗಳಿಲ್ಲ… ಇದು ಪಾಕಿಸ್ತಾನ ಪರಿಸ್ಥಿತಿಯಲ್ಲ, ನಮ್ಮ ದೇಶದ ರಾಜ್ಯವೊಂದರ ಸ್ಥಿತಿ!

Manipur violence

ನವದೆಹಲಿ: ಲೀಟರ್ ಪೆಟ್ರೋಲ್‌ಗೆ 200 ರೂ., (Petrol) ಜೀವ ಉಳಿಸುವ ಔಷಧಗಳ (Medicine) ಕೊರತೆ, ಎಟಿಎಂಗಳಲ್ಲಿ ಹಣ ಇಲ್ಲ… ಈ ಪರಿಸ್ಥಿತಿ ನಮ್ಮ ನೆರೆಯ ಶ್ರೀಲಂಕಾ ಅಥವಾ ಪಾಕಿಸ್ತಾನದ ಅಲ್ಲ. ಬದಲಿಗೆ, ಈಶಾನ್ಯ ರಾಜ್ಯ ಮಣಿಪುರದ (Manipur) ಪರಿಸ್ಥಿತಿ ಇದು. ಎರಡು ಸಮುದಾಯಗಳ ನಡುವಿನ ಗಲಾಟೆಯಿಂದ ಹೊತ್ತಿ ಉರಿದ ಮಣಿಪುರ ಜನಸಾಮಾನ್ಯ ಸ್ಥಿತಿ ಅಕ್ಷರಶಃ ಬೀದಿಗೆ ಬಿದ್ದಿದೆ. ಇಲ್ಲಿ ಏನೂ ಸಿಗುತ್ತಿಲ್ಲ. ಪೆಟ್ರೋಲ್‌ಗೆ ಸಾಲುಗಟ್ಟಿದ ದ್ವಿಚಕ್ರವಾಹನಗಳನ್ನು ಕಾಣಬಹುದು, ಅಂಗಡಿ ಮುಂಗಟ್ಟು ದಿನದ ಒಂದೆರಡು ಗಂಟೆಗಳು ಮಾತ್ರವೇ ಓಪನ್ ಆಗಿರುತ್ತವೆ. ಹಾಗಾಗಿ ಇಲ್ಲಿ ಜನರ ಜೀವನ ಸಂಪೂರ್ಣವಾಗಿ ಹದಗೆಟ್ಟಿದೆ. ವಿಶೇಷವಾಗಿ ಇಂಫಾಲ್‌ನಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಹೈವೇಗಳನ್ನು ಬಂದ್ ಮಾಡಿದ್ದರ ಪರಿಣಾಮ ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿಲ್ಲ(2023 Manipur violence).

ಮೈತೈ ಹಾಗೂ ಕುಕಿ ಸಮುದಾಯದ ನಡುವಿನ ಭಯಂಕ ಹಿಂಸಾಚಾರ ಸಂಭವಿಸಿ ಒಂದು ತಿಂಗಳಾಗುತ್ತ ಬಂತು. ಪರಿಶಿಷ್ಟ ಪಂಗಡಕ್ಕೆ ಮೈತೈ ಸಮುದಾಯವನ್ನು ಸೇರಿಸಬೇಕೆಂಬ ಬೇಡಿಕೆಯನ್ನು ವಿರೋಧಿಸಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ನಡೆಸಿದ ಪ್ರತಿಭಟನೆ ವೇಳೆ ಆರಂಭವಾದ ಹಿಂಸಾಚಾರವೂ ಇಡೀ ಮಣಿಪುರವನ್ನು ನಡುಗಿಸಿದೆ. ಈ ಹಿಂಸಾಚರದಲ್ಲಿ ಈವರೆಗೆ 98 ಜನರು ಮೃತಪಟ್ಟಿದ್ದು, 310ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎರಡೂ ಸಮುದಾಯಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ.

ಮಣಿಪುರದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ತಗ್ಗಿದಂತೆ ಜನಜೀವನ ಮುಂದುವರೆಯಬೇಕು. ಆದರೆ ಅದಕ್ಕಾಗಿ ದೈನಂದಿನ ಜೀವನಕ್ಕೆ ಅಗತ್ಯ ವಸ್ತುಗಳ ಅಗತ್ಯವಿದೆ. ಅಂತಹ ಸರಕುಗಳ ಕೊರತೆಯು ಹಿಂಸಾಚಾರದ ಪ್ರಮುಖ ಹೊಡೆತಗಳಲ್ಲಿ ಒಂದಾಗಿದೆ. ಮೈತೈ ಮತ್ತು ಕುಕಿ ಸಮುದಾಯಗಳು ಸಂಘರ್ಷಕ್ಕಿಳಿದಿವೆ. ಆದರೆ, ಇದರಿಂದೂ ಎರಡೂ ಸಮುದಾಯಗಳು ಭೀಕರ ಪರಿಣಾಮವನ್ನು ಎದುರಿಸುತ್ತಿವೆ.

ಈ ಹಿಂದೆ 30 ರೂಪಾಯಿ ಇದ್ದ ಅಕ್ಕಿಯ ಸರಾಸರಿ ಬೆಲೆ ಕೆಜಿಗೆ 60 ರೂಪಾಯಿಗೆ ಏರಿದೆ. ತರಕಾರಿ ಬೆಲೆಯ ಮೇಲೂ ಪರಿಣಾಮ ಬೀರಿದೆ. ಈ ಹಿಂದೆ ಕಿಲೋಗೆ 35 ರೂ.ಗೆ ಇದ್ದ ಈರುಳ್ಳಿ ಈಗ 70 ರೂ., ಮತ್ತು ಆಲೂಗಡ್ಡೆ ಬೆಲೆ 15 ರೂ.ನಿಂದ 40 ರೂ.ಗೆ ಏರಿಕೆಯಾಗಿದೆ. ಮೊಟ್ಟೆಯ ಬೆಲೆ ಈಗ 6 ರೂ.ನಿಂದ 10 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಈ ಹಿಂದೆ 220 ಇದ್ದ ಅಡುಗೆ ಎಣ್ಣೆ ಬೆಲೆ ಈಗ 250ರಿಂದ 280ಕ್ಕೆ ಏರಿಕೆಯಾಗಿದೆ.

ಭಾರತದ ಇತರ ನಗರಗಳಲ್ಲಿ ಲೀ. ಪೆಟ್ರೋಲ್ 100 ರೂ. ಇದ್ದರೆ, ಇಂಫಾಲ್‌ನಲ್ಲಿ 200 ರೂ.ಗೆ ಏರಿಕೆಯಾಗಿದೆ. ಹಾಗಿದ್ದೂ, ಬಹುತೇಕ ಪೆಟ್ರೋಲ್ ಪಂಪ್‌ಗಳಲ್ಲಿ ತೈಲ ಕೊರತೆ ಇದೆ. ಹಾಗಾಗಿ, ದುಬಾರಿ ಪೆಟ್ರೋಲ್‌ ಅನ್ನು ಜನರು ಬ್ಲಾಕ್ ಮಾರುಕಟ್ಟೆಯಲ್ಲಿ ಪಡೆಯುತ್ತಿದ್ದಾರೆ. ಇನ್ನು ಕೆಲವೇ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ತೈಲ ದೊರೆಯುತ್ತಿದೆ. ಆದರೆ, ಕಣ್ಣು ಹಾಯಿಸುವವರೆಗೂ ಸರತಿ ಸಾಲಿನಲ್ಲಿ ನಿಂತ ವಾಹನಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಶರಣಾಗಿ, ಇಲ್ಲವೇ ಶಿಕ್ಷೆಗೆ ಸಿದ್ಧರಾಗಿ; ಮಣಿಪುರ ಗಲಭೆಕೋರರಿಗೆ ಅಮಿತ್ ಶಾ ಖಡಕ್​ ಎಚ್ಚರಿಕೆ

ಈಗಾಗಲೇ ಹಿಂಸಾಚಾರದಿಂದ ಬಳಲುತ್ತಿರುವ ರಾಜ್ಯದಲ್ಲಿ ಸರಕುಗಳ ಕೊರತೆ ಜನರನ್ನು ಮತ್ತಷ್ಟು ತಟ್ಟಿದೆ. ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಎರಡು ಸಮುದಾಯಗಳ ಸದಸ್ಯರು ಎಲ್ಲರಿಗೂ ಸಾಕಷ್ಟು ಆಹಾರವಿಲ್ಲ ಮತ್ತು ಅವರು ಹಸಿವಿನಿಂದ ಮಲಗಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಒಂದು ಹಿಂಸಾತ್ಮಕ ಘಟನೆಯು ಮಣಿಪುರದ ಸಾಮಾನ್ಯ ಜನರ ಜೀವನಕ್ಕೆ ಭಾರೀ ಹೊಡೆತವನ್ನು ನೀಡಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version