Site icon Vistara News

Electoral Bonds: ಚುನಾವಣಾ ಬಾಂಡ್‌ ವಿವರ ಸಲ್ಲಿಸಿದ್ದೇವೆ: ಸುಪ್ರೀಂಗೆ ಅಫಿಡವಿಟ್‌ ನೀಡಿ ಕೈಮುಗಿದ ಎಸ್‌ಬಿಐ

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court)ನ ಖಡಕ್​ ಆದೇಶದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಚುನಾವಣಾ ಬಾಂಡ್​ಗಳ (Electoral Bonds) ಅಂಕಿ ಅಂಶಗಳು ಹಾಗೂ ಎಲ್ಲ ಮಾಹಿತಿಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ (Election commission) ನೀಡಿದ ಮರು ದಿನವೇ ಅಫಿಡವಿಟ್ ಸಲ್ಲಿಸಿದೆ. ಮಾರ್ಚ್‌ 12ರ ಒಳಗೆ ಚುನಾವಣೆ ಬಾಂಡ್‌ಗಳ ಕುರಿತು ಎಸ್‌ಬಿಐ ಮಾಹಿತಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಈ ಆದೇಶದಂತೆ ಎಸ್​ಬಿಐ ಮಂಗಳವಾರ ಸಂಜೆ ಬಾಂಡ್​ಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್ ಯೋಜನೆಯನ್ನು ರದ್ದುಗೊಳಿಸುವ ಮೊದಲು ಏಪ್ರಿಲ್ 2019 ಮತ್ತು ಫೆಬ್ರವರಿ 15, 2024 ರ ನಡುವೆ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ವಿತರಿಸಲಾಗಿದೆ ಎಂದು ಬ್ಯಾಂಕ್ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಜತೆಗೆ ಪೆನ್‌ಡ್ರೈವ್‌ನಲ್ಲಿ ಚುನಾವಣಾ ಸಂಸ್ಥೆಗೆ ಡೇಟಾವನ್ನು ಸಲ್ಲಿಸಿದೆ ಎಂದು ಹೇಳಿದೆ. ಡೇಟಾ, ಪಾಸ್‌ವರ್ಡ್-ರಕ್ಷಿತವಾಗಿರುವ ಎರಡು PDF ಫೈಲ್‌ಗಳಲ್ಲಿದೆ ಎಂದು ಎಸ್​ಬಿಐ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

“ಮಂಗಳವಾರದ ಕೆಲಸದ ಅವಧಿಯಲ್ಲಿಯೇ (Business Hours) ಚುನಾವಣಾ ಬಾಂಡ್‌ಗಳ ಕುರಿತು ಎಸ್‌ಬಿಐ, ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು. ಇನ್ನು ಚುನಾವಣೆ ಆಯೋಗವು ಮಾರ್ಚ್‌ 15ರ ಸಂಜೆ 5 ಗಂಟೆಯೊಳಗೆ ಎಸ್‌ಬಿಐ ನೀಡಿದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ಆದೇಶಿಸಿತು. ಇದರಿಂದಾಗಿ ಹೆಚ್ಚಿನ ಕಾಲಾವಧಿ ಬೇಕು ಎಂದು ಅರ್ಜಿ ಸಲ್ಲಿಸಿದ ಎಸ್‌ಬಿಐಗೆ ತೀವ್ರ ಹಿನ್ನಡೆಯಾಗಿತ್ತು.

ಎರಡು ವಿಭಾಗಗಳಲ್ಲಿ ಮಾಹಿತಿ ನೀಡಲು ಸೂಚನೆ

ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ (Redeem) ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿತ್ತು.

ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಿತು. ಎಸ್‌ಬಿಐ ಪರ ಹರೀಶ್‌ ಸಾಳ್ವೆ ವಾದ ಮಂಡಿಸಿದರು. “ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಇನ್ನಷ್ಟು ಸಮಯ ಬೇಕು. ಎಲ್ಲ ಮಾಹಿತಿಯನ್ನು ಒಗ್ಗೂಡಿಸಿ ಚುನಾವಣೆ ಆಯೋಗಕ್ಕೆ ನೀಡಲಾಗುತ್ತದೆ. ಅದಕ್ಕಾಗಿ ಸಮಯ ಬೇಕು” ಎಂದು ವಾದ ಮಂಡಿಸಿದ್ದರು.

ಎಸ್‌ಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಕುರಿತು ಮಾಹಿತಿ ಒದಗಿಸಬೇಕು ಎಂದು ಫೆಬ್ರವರಿ 15ರಂದೇ ತೀರ್ಪು ನೀಡಲಾಗಿದೆ. ಎಸ್‌ಬಿಐ ಇದುವರೆಗೆ ಏನು ಮಾಡಿತು? ಇಷ್ಟು ದಿನವಾದರೂ ಏಕೆ ಮಾಹಿತಿ ಸಂಗ್ರಹಿಸಲು ಆಗಲಿಲ್ಲ? ಅಷ್ಟಕ್ಕೂ, ಮುಚ್ಚಿದ ಲಕೋಟೆಯಲ್ಲಿ ಏನಿದೆ? ಅದನ್ನು ಮೊದಲು ಬಹಿರಂಗಪಡಿಸಿ. ಎಸ್‌ಬಿಐ ನೀಡಿದ ಡೆಡ್‌ಲೈನ್‌ ಮುಗಿಯಲು ಎರಡು ದಿನ ಬಾಕಿ ಇರುವಾಗ ಹೆಚ್ಚಿನ ಸಮಯ ಬೇಕು ಎಂದು ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಬೇಕು ಎಂದು ಸಲ್ಲಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

22,217 ಚುನಾವಣಾ ಬಾಂಡ್‌ಗಳ ಮಾರಾಟದ ಕುರಿತು ಎಲ್ಲ ಮಾಹಿತಿ ಸಂಗ್ರಹಿಸಲು ಇನ್ನಷ್ಟು ಸಮಯ ಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ ಮಾಡಿತ್ತು. ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ತೀರ್ಪಿನ ಪ್ರಕಾರ, ಮಾರ್ಚ್‌ 6ರೊಳಗೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಬೇಕಿತ್ತು. ಅಷ್ಟೇ ಅಲ್ಲ, ವೆಬ್‌ಸೈಟ್‌ನಲ್ಲಿ ದೇಣಿಗೆ ನೀಡಿದವರ ಮಾಹಿತಿಯನ್ನು ಮಾರ್ಚ್‌ 13ರೊಳಗೆ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಿತ್ತು. ಕೊನೆಗೆ ನ್ಯಾಯಾಲಯವು, ಜೂನ್‌ 30ರವರೆಗೆ ಕಾಲಾವಕಾಶ ಕೋರಿದ್ದ ಎಸ್‌ಬಿಐ ಅರ್ಜಿಯನ್ನು ತಿರಸ್ಕರಿಸಿ, ಮಂಗಳವಾರ ಸಂಜೆಯೊಳಗೆ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿತ್ತು.

ಇದನ್ನೂ ಓದಿ: Electoral Bond : ಆಯೋಗಕ್ಕೆ ಚುನಾವಣಾ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ

Exit mobile version