Site icon Vistara News

Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

Kedarnath Temple

228 Kgs of gold missing from Kedarnath temple; alleges Jyotirmath Shankaracharya

ಮುಂಬೈ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿರುವ ರತ್ನಭಂಡಾರವನ್ನು ತೆಗೆಯಲಾಗಿದ್ದು, ಕೆ.ಜಿಗಟ್ಟಲೆ ಚಿನ್ನ, ಬೆಳ್ಳಿಯ ಆಭರಣಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಉತ್ತರಾಖಂಡದಲ್ಲಿರುವ ಐತಿಹಾಸಿಕ ಕೇದಾರನಾಥ ದೇವಾಲಯದಲ್ಲಿದ್ದ (Kedarnath Temple) ಸುಮಾರು 228 ಕೆ.ಜಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (Swami Avimukteshwaranand) ಅವರೇ ಈ ಕುರಿತು ಆರೋಪ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಶಿವಸೇನೆ ನಾಯಕ (UBT) ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣದ ಕುರಿತು ಚಿಂತನೆ ನಡೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. “ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ? ಆ ಮೂಲಕ ಇಲ್ಲೂ ಹಗರಣ ಮಾಡಲಾಗುತ್ತದೆಯೇ” ಎಂದು ಪ್ರಶ್ನಿಸಿದರು.

“ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನವನ್ನು ಮಂಗಮಾಯ ಮಾಡಲಾಗಿದೆ. ಆದರೆ, ಇದುವರೆಗೆ ತನಿಖೆ ಆರಂಭವಾಗಿಲ್ಲ. ಇದಕ್ಕೆಲ್ಲ ಯಾರು ಹೊಣೆ? ಈಗ ಅವರು ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ನಡೆಯಬಾರದು” ಎಂಬುದಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಖಾರವಾಗಿ ಹೇಳಿದರು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಕೇದಾರನಾಥ ದೇವಾಲಯವೂ ಒಂದಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಹಿಂದುಗಳು ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಕೇದಾರನಾಥ ಯಾತ್ರೆ ಆರಂಭವಾಗಿದೆ.

ಉದ್ಧವ್‌ ಠಾಕ್ರೆ ಮತ್ತೆ ಸಿಎಂ ಆಗಲಿ

ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಸನಾತನ ಧರ್ಮವನ್ನು ಅನುಸರಿಸುವವರು. ನಮಗೆ ಪಾಪ ಹಾಗೂ ಪುಣ್ಯದ ವ್ಯಾಖ್ಯಾನ ಗೊತ್ತಿದೆ. ಜಗತ್ತಿನಲ್ಲೇ ದೊಡ್ಡ ಪಾಪ ಎಂದರೆ ಅದು ಮೋಸ ಮಾಡುವುದು. ಉದ್ಧವ್‌ ಠಾಕ್ರೆ ಅವರಿಗೆ ಅಂತಹ ಮೋಸ ಆಗಿದೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೂ ನಮಗಾದ ನೋವು ಕಡಿಮೆಯಾಗುವುದಿಲ್ಲ. ಉದ್ಧವ್‌ ಠಾಕ್ರೆ ಅವರಿಗೆ ಮೋಸ ಆಗಿದ್ದಕ್ಕೆ ಮಹಾರಾಷ್ಟ್ರದ ಜನರಿಗೂ ನೋವಾಗಿದೆ. ಕಳೆದ ಚುನಾವಣೆಯಲ್ಲೂ ಇದರ ಪ್ರತಿಬಿಂಬ ಗೋಚರವಾಗಿದೆ” ಎಂದು ಹೇಳಿದರು. ಉದ್ಧವ್‌ ಠಾಕ್ರೆ ಅವರ ಶಿವಸೇನೆಯು ಇಬ್ಭಾಗವಾಗಿ, ಏಕನಾಥ್‌ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ, ಸರ್ಕಾರ ರಚಿಸಿದ ಕುರಿತು ಅವರು ಹೇಳಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Exit mobile version