Site icon Vistara News

26/11 Attack: ಹಮಾಸ್‌ ದಾಳಿಯೇ ಪಾಕ್‌ ಉಗ್ರರಿಗೆ ಮಾದರಿ! ಇನ್ನೊಂದು ಮುಂಬಯಿ ದಾಳಿ ಎದುರಿಸಲು ಸಜ್ಜಾಗಿದೆಯೇ ದೇಶ?

Mumbai terror Attack

ಹೊಸದಿಲ್ಲಿ: ಮುಂಬಯಿಯ ಮೇಲೆ ಪಾಕ್‌ ಮೂಲದ ಭಯೋತ್ಪಾದಕರು ನಡೆಸಿದ ಬರ್ಬರ ದಾಳಿಗೆ (26/11 Attack) ನಾಳೆಗೆ 15 ವರ್ಷ ಪೂರ್ತಿಯಾಗುತ್ತಿದೆ. ಇತ್ತೀಚೆಗೆ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು (Hamas attack) ನಡೆಸಿದ ದಾಳಿಯೂ ಇದೇ ಮಾದರಿಯಲ್ಲಿತ್ತು. ಇದರೊಂದಿಗೆ, ಹಮಾಸ್‌ನಿಂದ ಪ್ರೇರಿತರಾದ ಪಾಕ್‌ ಉಗ್ರರು ಮತ್ತೆ ಇಂಥ ದುಃಸ್ಸಾಹಸ ನಡೆಸಬಹುದೇ ಎಂಬ ಆತಂಕವೂ ಮೂಡಿದೆ.

ಅಕ್ಟೋಬರ್ 7ರಂದು ಇಸ್ರೇಲ್‌ನ ಮೇಲೆ ಹಮಾಸ್‌ ನಡೆಸಿದ ದಾಳಿಗಳಲ್ಲಿ ಕನಿಷ್ಠ 1,400 ಇಸ್ರೇಲಿ ನಾಗರಿಕರು ಬಲಿಯಾಗಿದ್ದರು. ಹಾಗೇ ಮತ್ತೊಂದು 26/11 ಮಾದರಿಯ ಹತ್ಯಾಕಾಂಡಕ್ಕೆ ಉಗ್ರರು ಯತ್ನಿಸುವುದಿಲ್ಲ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಅತ್ತ ಹಮಾಸ್ ಉಗ್ರರು ಇರಾನ್‌ ಬೆಂಬಲ ಹೊಂದಿದ್ದರೆ, ಇಲ್ಲಿ ಲಷ್ಕರೆ ಉಗ್ರರು ಪಾಕ್‌ ಬೆಂಬಲ ಹೊಂದಿದ್ದಾರೆ. ಪ್ರಪಂಚದಾದ್ಯಂತ ಅಮಾಯಕ ನಾಗರಿಕರ ವಿರುದ್ಧ ರಕ್ತಸಿಕ್ತ ಅಭಿಯಾನವನ್ನು ಮುಂದುವರಿಸಲು ಉಗ್ರ ಸಂಘಟನೆಗಳು ಕಟಿಬದ್ಧವಾಗಿವೆ.

ಕಳೆದ 15 ವರ್ಷಗಳಲ್ಲಿ ಭಾರತ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಪ್ರಸ್ತುತ ಸರ್ಕಾರದ ದೃಢ ನಾಯಕತ್ವವು, ಯಾವುದೇ ಭಯೋತ್ಪಾದಕ ದಾಳಿಗೆ ಮುನ್ನ ಭಯೋತ್ಪಾದಕರು ಹತ್ತಾರು ಬಾರಿ ಯೋಚಿಸಿಕೊಳ್ಳುವಂತೆ ಮಾಡಿದೆ. 26/11 ದಾಳಿಯು ಲಷ್ಕರ್-ಎ-ತೊಯ್ಬಾ ಮತ್ತು ISIಗಳ ಜಂಟಿ ಕೃತ್ಯವಾಗಿತ್ತು. ಆಗಿನ ಯುಪಿಎ ಸರಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ದಾಳಿ ಉಗ್ರರ ಪಾಲಿಗೆ ಯಶಸ್ವಿಯಾಗಿತ್ತು.

ಆದರೆ ಭಾರತ 26/11 ಮಾದರಿಯ ಭಯೋತ್ಪಾದಕ ದಾಳಿಗಳಿಗೆ ಇನ್ನಷ್ಟು ಸಿದ್ಧವಾಗಬೇಕಿದೆ. ಈ ಹಿಂದೆ ಭಾರತವು ಭಯೋತ್ಪಾದನೆಯ ವಿರುದ್ಧ ಬೆಂಬಲವನ್ನು ಕೋರಿ ಅಂತಾರಾಷ್ಟ್ರೀಯ ಸಮುದಾಯದೆದುರು ಹೋಗುತ್ತಿತ್ತು; ಆದರೆ ಈಗ, ಪ್ರತೀಕಾರದ ಭಯದಿಂದ ಅಪರಾಧಿಗಳು ಜಾಗತಿಕ ಬೆಂಬಲಕ್ಕಾಗಿ ಓಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಎಚ್‌ಟಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

2014ರ ಮೊದಲು 966 ಅಮಾಯಕ ನಾಗರಿಕರನ್ನು ನಾವು ಭಯೋತ್ಪಾದಕ ದಾಳಿಯಲ್ಲಿ ಕಳೆದುಕೊಂಡಿದ್ದೆವು. 2005ರಿಂದ ಪ್ರಾರಂಭವಾದ ದಾಳಿ 2013ರವರೆಗೆ ಮುಂದುವರಿದಿತ್ತು. ಪ್ರಮುಖ ನಗರಗಳು ಭಯೋತ್ಪಾದಕರ ದಾಳಿಗೆ ಒಳಗಾದವು. ಅವರೆಲ್ಲರಿಗೂ ಪಾಕಿಸ್ತಾನದ ಬೆಂಬಲವಿತ್ತು. 2014ರ ನಂತರ ಒಳನಾಡಿನೊಳಗಿನ ದಾಳಿಗಳು ನಡೆಯಲಿಲ್ಲ. ಗಡಿಯಂಚಿನಲ್ಲಿ ಮುಂದುವರಿದವು.

ಉದಾಹರಣೆಗೆ, ಪಠಾಣ್‌ಕೋಟ್ ವಾಯುನೆಲೆ ದಾಳಿ ಅಥವಾ ಪುಲ್ವಾಮಾ ದಾಳಿ, ಒಳನಾಡಿನ ಮೇಲೆ ಪರಿಣಾಮ ಬೀರಿಲ್ಲ. 2016 ಮತ್ತು 2019ರಲ್ಲಿ ಪಿಒಕೆಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‌ಗಳ ನಂತರ ಬಂದ ಪ್ರತೀಕಾರದ ಭಯವು, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಹಿಂಜರಿಯುವಂತೆ ಮಾಡಿವೆ. ಏಕೆಂದರೆ ಈ ಸರ್ಕಾರ ಭಯೋತ್ಪಾದನೆಗೆ ತನ್ನ ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ದೃಢವಾಗಿದೆ ಮತ್ತು ಪ್ರತೀಕಾರ ತೆಗೆದುಕೊಳ್ಳುತ್ತಿದೆ.

ಪಾಕಿಸ್ತಾನದ ಮೂಲಭೂತ ಮನಸ್ಥಿತಿಯೆಂದರೆ ಅದು ಭಾರತವನ್ನು ಎದುರಾಳಿಯಾಗಿ ದ್ವೇಷದಿಂದ ಪರಿಗಣಿಸುವುದನ್ನು ಮುಂದುವರೆಸಿದೆ. ಪಾಕಿಸ್ತಾನಕ್ಕೆ ಚೀನಾ ಬೆಂಬಲವೂ ಇದೆ. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಉಗ್ರ ನಿರ್ಬಂಧಗಳ ಸಮಿತಿಯ ಪಟ್ಟಿಯಲ್ಲಿ 26/11 ದಾಳಿಯ ಪ್ರಮುಖ ರೂವಾರಿ ಸಾಜಿದ್ ಮೀರ್‌ನನ್ನು ಸೇರಿಸುವ ನಿರ್ಣಯವನ್ನು ಯುಎಸ್ ಪ್ರಾಯೋಜಿಸಿತು; ಆದರೆ ಅದನ್ನು ಚೀನಾ ನಿರ್ಬಂಧಿಸಿತು. ಚೀನಾದ ಸಂಪೂರ್ಣ ಬೆಂಬಲದೊಂದಿಗೆ ಪಾಕಿಸ್ತಾನ ಭಾರತದ ವಿರುದ್ಧ ಅದೇ ನಿಲುವನ್ನು ಮುಂದುವರೆಸಿದೆ.

ಜಾಗತಿಕ ಸಮುದಾಯ 26/11 ದಾಳಿಯ ನಂತರ ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದೆ. ಉದಾಹರಣೆಗೆ, 26/11ರ ಮೂರು ದಿನಗಳಲ್ಲಿ, ಅಮೆರಿಕ ಪೂರ್ಣ ಪ್ರಮಾಣದ ಎಫ್‌ಬಿಐ ತಂಡವನ್ನು ಮುಂಬೈಗೆ ಕಳುಹಿಸಿತು ಮತ್ತು ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಕಂಡುಹಿಡಿಯಲು ಭಾರತಕ್ಕೆ ಸಹಾಯ ಮಾಡಿತು. ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹವ್ವುರ್ ಹುಸೇನ್ ರಾಣಾ ಸೇರಿದಂತೆ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಜನರನ್ನು ಭಾರತಕ್ಕೆ ಒಪ್ಪಿಸಿತು. ಆದರೆ ಹೆಡ್ಲಿಯ ಆರ್ಥಿಕ ವಿವರಗಳನ್ನು ಭಾರತದೊಂದಿಗೆ ಹಂಚಿಕೊಂಡಿಲ್ಲ.

ಎರಡು ದಿನಗಳ ಹಿಂದೆ ಇಸ್ರೇಲ್ ಲಷ್ಕರ್-ಎ-ತಯ್ಬಾವನ್ನು ಭಯೋತ್ಪಾದಕ ಗುಂಪು ಎಂದು ಬ್ರಾಂಡ್ ಮಾಡಲು ನಿರ್ಧರಿಸಿತು. ಆದರೆ ಹೀಗೆ ಮಾಡಲು ಇಸ್ರೇಲ್‌ಗೆ 15 ವರ್ಷಗಳ ಕಾಲ ಮತ್ತು ಹಮಾಸ್‌ನಿಂದ ತೀವ್ರ ಪೆಟ್ಟು ಬೇಕಾಯಿತು. ಪ್ರಪಂಚದಲ್ಲಿ ಇಂದು ಜೋರಾಗಿರುವ ಮೂಲಭೂತವಾದ, ಕೋಮು ಧ್ರುವೀಕರಣ ಮತ್ತು ಅಸ್ಥಿರತೆಯ ಮಟ್ಟವನ್ನು ಭಯೋತ್ಪಾದಕ ದಾಳಿಗಳು ಇನ್ನಷ್ಟು ಹೆಚ್ಚಿಸುತ್ತಿದ್ದು, ಇದರ ವಿರುದ್ಧ ಜಾಗತಿಕ ಪ್ರಭುತ್ವಗಳು ಸಂಘಟಿತವಾಗಬೇಕಾದ ಅಗತ್ಯವನ್ನು ದೊಡ್ಡ ದೇಶಗಳು ಕಂಡುಕೊಂಡಿವೆ.

ಇದನ್ನೂ ಓದಿ: 26/11 Attack: ಮುಂಬೈ ದಾಳಿ ಉಗ್ರನ ಅರ್ಜಿ ತಿರಸ್ಕರಿಸಿದ ಅಮೆರಿಕ ಕೋರ್ಟ್;‌ ಶೀಘ್ರವೇ ಭಾರತಕ್ಕೆ ಹಸ್ತಾಂತರ

Exit mobile version