Site icon Vistara News

Indian Student: ಅಮೆರಿಕದಲ್ಲಿ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ; ತಿಂಗಳಲ್ಲೇ ಇಬ್ಬರ ಹತ್ಯೆ

Aaditya Adlakha

26 year old Indian doctoral student from Delhi killed in US

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತದ ಮತ್ತೆ ವಿದ್ಯಾರ್ಥಿಯೊಬ್ಬರನ್ನು (Indian Student) ಹತ್ಯೆ ಮಾಡಲಾಗಿದೆ. ಒಹಿಯೋ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ ದೆಹಲಿ ಮೂಲದ ಆದಿತ್ಯ ಅದ್ಲಾಖ (Aaditya Adlakha) ಅವರು ಕಾರಿನಲ್ಲಿ ಚಲಿಸುವಾಗಲೇ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಲಾಗಿದೆ. ನವೆಂಬರ್‌ 9ರಂದೇ ಆದಿತ್ಯ ಅದ್ಲಾಖ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣವು ತಡವಾಗಿ ಸುದ್ದಿಯಾಗಿದೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಿದ ಆದಿತ್ಯ ಅದ್ಲಾಖ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಒಹಿಯೋ ರಾಜ್ಯದ ಯುನಿವರ್ಸಿಟಿ ಆಫ್‌ ಸಿನ್ಸಿನ್ನಾಟಿ ಮೆಡಿಕಲ್‌ ಸ್ಕೂಲ್‌ನಲ್ಲಿ ಆಣ್ವಿಕ (Molecular) ಹಾಗೂ ಅಭಿವೃದ್ಧಿ ಜೀವಶಾಸ್ತ್ರದ ವಿಷಯದ ಕುರಿತು ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದರು. ಇವರು ಕಾರಿನಲ್ಲಿ ಚಲಿಸುತ್ತಿದ್ದರು. ಇದೇ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕಾರು ಗೋಡೆಗೆ ಗುದ್ದಿದ್ದು, ಆದಿತ್ಯ ಅದ್ಲಾಖ ಅವರಿಗೆ ಗುಂಡು ತಗುಲಿವೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿಯ ನಿಧನಕ್ಕೆ ವಿಶ್ವವಿದ್ಯಾಲಯ ಸಂತಾಪ ಸೂಚಿಸಿದೆ. ಇದರಿಂದಾಗಿ ಅಮೆರಿಕದಲ್ಲಿರುವ ಭಾರತದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ದೆಹಲಿಯ ರಾಮ್‌ಜಾಸ್‌ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದ ಆದಿತ್ಯ ಅದ್ಲಾಖ, 2020ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

ಕೆಲ ದಿನಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಯೊಬ್ಬ ಹತ್ಯೆಗೀಡಾಗಿದ್ದ. ಅಮೆರಿಕದ ಇಂಡಿಯಾನ ರಾಜ್ಯದ ಜಿಮ್‌ ಒಂದರಲ್ಲಿ ವರ್ಕೌಟ್‌ ಮಾಡುತ್ತಿದ್ದಾಗಲೇ ಚಾಕು ಇರಿತಕ್ಕೊಳಗಾಗಿ, ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್‌ ಪುಜಾ ನವೆಂಬರ್‌ 8ರಂದು ಮೃತಪಟ್ಟಿದ್ದ.

ಇದನ್ನೂ ಓದಿ: Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್;‌ ಸಾವಿಗೆ ಭಾರತ ಖಂಡನೆ

ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವರುಣ್‌ ರಾಜ್, ಅಕ್ಟೋಬರ್‌ 29ರಂದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್‌ ಅಂಡ್ರಾಡೆ (24) ಎಂಬ ಯುವಕನು ಜಿಮ್‌ ಪ್ರವೇಶಿಸಿದ್ದ. ಜಿಮ್‌ ಪ್ರವೇಶಿಸಿದವನೇ ವರುಣ್‌ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್‌ ರಾಜ್ ಪುಚಾ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version