Site icon Vistara News

Earthquake: ಮಹಾರಾಷ್ಟ್ರದಲ್ಲಿ ಭೂಕಂಪ; ನಿದ್ದೆಗಣ್ಣಲ್ಲೇ ಮನೆಯಿಂದ ಹೊರಬಂದ ಜನ

Earthqake

ಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಸೋಮವಾರ (ನವೆಂಬರ್‌ 20) ಬೆಳಗ್ಗೆ ಬೆಳಗ್ಗೆಯೇ ಭೂಕಂಪ (Earthquake) ಸಂಭವಿಸಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ನಿದ್ದೆಗಣ್ಣಲ್ಲಿಯೇ ಮನೆಯಿಂದ ಹೊರಬಂದಿದ್ದಾರೆ. ರಿಕ್ಟರ್‌ ಮಾಪನದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (National Centre for Seismology) ಮಾಹಿತಿ ನೀಡಿದೆ.

ಹಿಂಗೋಲಿಯಲ್ಲಿ ಜನ ಬೆಳಗ್ಗಿನ ನಿದ್ದೆಯಲ್ಲಿದ್ದರು. ಇದೇ ವೇಳೆ ಭೂಮಿ ಕಂಪಿಸಿದೆ. ಇದರಿಂದಾಗಿ ಆತಂಕದಲ್ಲಿಯೇ ಜನ ಮನೆಯಿಂದ ಹೊರಗೆ ಓಡಿ ಬಂದರು. ಕೆಲ ಕಾಲ ಅವರು ಮನೆಯೊಳಗೆ ಹೋಗಲೂ ಹೆದರಿದರು ಎಂದು ತಿಳಿದುಬಂದಿದೆ. ಆದಾಗ್ಯೂ, ಭೂಕಂಪದಿಂದ ಯಾವುದೇ ದುರಂತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಡಮಾನ್‌ನಲ್ಲಿ ಭಾನುವಾರ ರಾತ್ರಿ (ನವೆಂಬರ್‌ 19) 4.5 ತೀವ್ರತೆಯ ಭೂಕಂಪ ಸಂಭವಿಸಿದೆ. ನವೆಂಬರ್‌ 16ರಂದು ಜಮ್ಮು-ಕಾಶ್ಮೀರದ ದೋಡಾದಲ್ಲಿ ಭೂಕಂಪ ಸಂಭವಿಸಿತ್ತು.

ದೆಹಲಿಯಲ್ಲಿ 3 ಬಾರಿ ಭೂಕಂಪ

ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಒಂದೇ ವಾರದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿತ್ತು. ನವೆಂಬರ್‌ 3ರಂದು ರಾತ್ರಿ ದೆಹಲಿ, ಗುರುಗ್ರಾಮ, ಘಾಜಿಯಾಬಾದ್‌ ಸೇರಿ ಹಲವೆಡೆ ಭೂಕಂಪ ಸಂಭವಿಸಿತ್ತು. ನವೆಂಬರ್‌ 6ರ ಸಂಜೆ ಕೂಡ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದಾದ ಬಳಿಕ ನವೆಂಬರ್‌ 11ರಂದು ಕೂಡ ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಹಲವೆಡೆ ಭೂಮಿ ಕಂಪಿಸಿತ್ತು.

ಇದನ್ನೂ ಓದಿ: Delhi Earthquake: ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ; ಮನೆಯಿಂದ ಓಡಿಬಂದ ಜನ

ನೇಪಾಳದಲ್ಲಿ 157 ಜನ ಸಾವು

ನೇಪಾಳದಲ್ಲೂ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿತ್ತು.

Exit mobile version