Site icon Vistara News

Coronavirus | ಚೀನಾದಲ್ಲಿ ಕೊರೊನಾ ಉಲ್ಬಣದ ಬೆನ್ನಲ್ಲೇ ಭಾರತದಲ್ಲಿ ಮೂವರಿಗೆ ಓಮಿಕ್ರಾನ್‌, ಏರ್‌ಪೋರ್ಟ್‌ನಲ್ಲಿ ತಪಾಸಣೆ

Omicron In India

ನವದೆಹಲಿ: ಚೀನಾ ಸೇರಿ ಹಲವು ರಾಷ್ಟ್ರಗಳಲ್ಲಿ ಕೊರೊನಾ (Covid-19) ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲೂ ಮೂವರಿಗೆ ಓಮಿಕ್ರಾನ್‌ ಉಪತಳಿ ಓಮಿಕ್ರಾನ್‌ ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಗುಜರಾತ್‌ನ ವಡೋದರಾದಲ್ಲಿ ಇಬ್ಬರಿಗೆ ಹಾಗೂ ಒಡಿಶಾದಲ್ಲಿ ಒಬ್ಬರಿಗೆ ಬಿಎಫ್‌.7 ಉಪತಳಿ ದೃಢಪಟ್ಟಿದೆ.

ಚೀನಾದಲ್ಲೂ ಓಮಿಕ್ರಾನ್‌ ಉಪತಳಿಯಾದ ಬಿಎಫ್‌.7 ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲೂ ಮೂವರಿಗೆ ಇದೇ ಉಪತಳಿ ದೃಢಪಟ್ಟಿರುವ ಕಾರಣ ಆತಂಕ ಸೃಷ್ಟಿಸಿದೆ. ಮೂವರೂ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ, ಎರಡೂ ರಾಜ್ಯಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಏರ್‌ಪೋರ್ಟ್‌ನಲ್ಲಿ ತಪಾಸಣೆ
ಚೀನಾ, ಜಪಾನ್‌, ಫ್ರಾನ್ಸ್‌ ಸೇರಿ ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಿ ಪ್ರಯಾಣಿಕರ ರ‍್ಯಾಂಡಮ್‌ ತಪಾಸಣೆಗೆ ಸೂಚಿಸಲಾಗಿದೆ. ವಡೋದರಾದಲ್ಲಿ ಅಮೆರಿಕದಿಂದ ಬಂದ ಮಹಿಳೆಗೆ ಸೋಂಕು ದೃಢಪಟ್ಟಿರುವ ಕಾರಣ ತಪಾಸಣೆ ಮಾಡಲಾಗುತ್ತಿದೆ.

ಚೀನಾದಲ್ಲಿ ಸೋಂಕು ಹೆಚ್ಚಾಗಲು ಇದೇ ಉಪತಳಿ ಕಾರಣ
ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಹರಡುತ್ತಿರುವ ಕೊರೊನಾ ತಳಿ ಓಮಿಕ್ರಾನ್‌ನ ಉಪತಳಿಯಾದ ಬಿಎಫ್‌.7 ಅಪಾಯಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಚೀನಾ ಸೇರಿ ಹಲವು ದೇಶದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ತುರ್ತು ಸಭೆ ನಡೆಸಿದ್ದು, ಇದೇ ವೇಳೆ ಉಪತಳಿ ಕುರಿತು ಚರ್ಚೆಯಾಗಿದೆ. ಬಿಎಫ್‌.7 ಪ್ರಸರಣ ಜಾಸ್ತಿ ಹೊಂದಿದ್ದು, ಇದೇ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಸರ್ಕಾರ ತಿಳಿಸಿದೆ. ಭಾರತದಲ್ಲೂ ಇದೇ ಉಪತಳಿ ಪತ್ತೆಯಾದ ಕಾರಣ ಆತಂಕ ಮೂಡಿಸಿದೆ.

ಇದನ್ನೂ ಓದಿ | ವಿಸ್ತಾರ Explainer | ಚೀನಾದಲ್ಲಷ್ಟೇ ಇಲ್ಲ ಕೊರೊನಾ, ವಿಶ್ವದ ಎಲ್ಲೆಲ್ಲಿ ಆತಂಕ? ಭಾರತದ ಪರಿಸ್ಥಿತಿ ಏನು?

Exit mobile version