Site icon Vistara News

ಭಾರಿ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಜಾರ್ಖಂಡ್‌ ಕೈ ಶಾಸಕರು, ಆಪರೇಷನ್‌ ಕಮಲದ ದುಡ್ಡು?

Congress money

ಹೌರಾ (ಪಶ್ಚಿಮ ಬಂಗಾಳ): ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರು ಕಾರಿನಲ್ಲಿ ಭಾರಿ ಪ್ರಮಾಣದ ಹಣದೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೋಲ್ಕೊತಾ ಸಮೀಪದ ಹೌರಾದಲ್ಲಿ ಅವರನ್ನು ತಡೆ ಹಿಡಿಯಲಾಗಿದ್ದು, ಎಷ್ಟು ಹಣವಿದೆ, ಯಾರ ಹಣ, ಎಲ್ಲಿಗೆ ಒಯ್ಯಲಾಗುತ್ತಿತ್ತು ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಜಾರ್ಖಂಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ತುರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಇದು ಆಪರೇಷನ್‌ ಕಮಲದ ಹಣವಿರಬಹುದೇ ಎಂಬ ಸಂಶಯವೂ ಕೇಳಿಬರುತ್ತಿದೆ.

ಮೂವರು ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಶ್ಯಪ್‌ ಮತ್ತು ನಮನ್‌ ಬಿಕ್ಸಲ್‌ ಕೊಂಗಾರಿ ಅವರು ಸಾಗುತ್ತಿದ್ದ ಎಸ್‌ಯುವಿಯನ್ನು ಪಂಚ್ಲಾ ಪೊಲೀಸ್‌ ಠಾಣೆಯ ರಾಣಿಹಟಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ-೧೬ರಲ್ಲಿ ಶನಿವಾರ ರಾತ್ರಿ ತಡೆಯಲಾಗಿದೆ.
ʻʻನಮಗೆ ಸಿಕ್ಕಿದ ಕೆಲವು ಖಚಿತ ಮಾಹಿತಿಗಳ ಆಧಾರದಲ್ಲಿ ನಾವು ಕಾರನ್ನು ತಡೆ ಹಿಡಿದೆವು. ಜಾರ್ಖಂಡ್‌ನ ಮೂವರು ಶಾಸಕರು ಕಾರಿನಲ್ಲಿದ್ದರು. ಕಾರಿನಲ್ಲಿ ದೊಡ್ಡ ಪ್ರಮಾಣದ ಹಣವೂ ಇತ್ತು. ಹಣದ ಪ್ರಮಾಣ ದೊಡ್ಡದು ಇದ್ದುದರಿಂದ ಕೌಂಟಿಂಗ್‌ ಮೆಷಿ ತರಿಸೇಕಾಯಿತು. ಎಲ್ಲ ಲೆಕ್ಕಾಚಾರ ಮುಗಿದ ಬಳಿಕವಷ್ಟೇ ಹಣ ಎಷ್ಟಿತ್ತು ಎಂದು ಹೇಳಬಹುದುʼʼ ಎಂದು ಹೌರಾ ಗ್ರಾಮೀಣ ವಿಭಾಗದ ಎಸ್‌ಪಿಯಾಗಿರುವ ಸ್ವಾತಿ ಭಂಗಾಲಿಯಾ ತಿಳಿಸಿದ್ದಾರೆ.

ಕಾರಿನಲ್ಲಿದ್ದ ಶಾಸಕರಲ್ಲಿ ಅನ್ಸಾರಿ ಜಮ್ತಾರಾದ ಎಂಎಂಎ ಆದರೆ, ಕಶ್ಯಪ್‌ ಅವರು ರಾಂಚಿ ಜಿಲ್ಲೆಯ ಖಜ್ರಿಯ ಜನಪ್ರತಿನಿಧಿ. ಕೊಂಗಾರಿ ಅವರು ಶಿಮ್‌ದೇಗಾ ಜಿಲ್ಲೆಯ ಕೊಲೆಬಿರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ. ಶಾಸಕರಲ್ಲದೆ ಕಾರಿನಲ್ಲಿ ಇನ್ನೂ ಇಬ್ಬರು ಇದ್ದರು. ಕಾರಿನಲ್ಲಿ ʻಜಮ್ತಾರಾ ಎಂಎಲ್‌ ಎʼ ಎಂಬ ಬೋರ್ಡ್‌ ಕೂಡಾ ಇತ್ತು. ಜತೆಗೆ ಕಾಂಗ್ರೆಸ್‌ನ ಚುನಾವಣಾ ಚಿಹ್ನೆಯನ್ನೂ ಅಳವಡಿಸಲಾಗಿತ್ತು.

ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರು ಭಾರಿ ಮೊತ್ತದೊಂದಿಗೆ ಸಿಕ್ಕಿಬಿದ್ದಿರುವುದು ಆಘಾತಕಾರಿ ಘಟನೆ ಎಂದು ತೃಣಮೂಲ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಭಾರಿ ಪ್ರಮಾಣದ ಹಣ ಸಿಕ್ಕಿದ ಬೆನ್ನಿಗೇ ಈ ರೀತಿ ದಾರಿಯಲ್ಲಿ ಹಣ ಸಿಕ್ಕಿದ್ದು ಪಶ್ಚಿಮ ಬಂಗಾಳದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಸಂಚು ಎಂದ ಕಾಂಗ್ರೆಸ್‌

ಕಾಂಗ್ರೆಸ್‌ ಶಾಸಕರು ಭಾರಿ ಮೊತ್ತದೊಂದಿಗೆ ಸಿಕ್ಕಿಬಿದ್ದಿರುವ ಘಟನೆಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜೇಶ್‌ ಠಾಕೂರ್‌ ಇದರ ಬಿಜೆಪಿ ಬಿಜೆಪಿ ಕೈವಾಡ ಇದೆ ಎಂದಿದ್ದಾರೆ. ಅವರು ಬಿಜೆಪಿಯೇತರ ಸರಕಾರಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ವಿದ್ಯಮಾನ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಆಪರೇಷನ್‌ ಕಮಲ ನಡೆಯುತ್ತಿದೆಯಾ?
೮೧ ಸದಸ್ಯರ ಜಾರ್ಖಂಡ್‌ ರಾಜ್ಯ ವಿಧಾನಸಭೆಯಲ್ಲಿ ಜೆಎಂಎಂ(೩೦ ಶಾಸಕರು) ಮತ್ತು ಕಾಂಗ್ರೆಸ್‌ (೧೬ ಶಾಸಕರು) ಜತೆ ಸೇರಿ ಸರಕಾರ ನಡೆಸುತ್ತಿವೆ. ಇದಕ್ಕೆ ಆರ್‌ಜೆಡಿಯ ಒಬ್ಬ ಶಾಸಕನ ಬೆಂಬಲವಿದೆ. ಇತ್ತ ಪ್ರತಿಪಕ್ಷದಲ್ಲಿರುವ ಬಿಜೆಪಿ ೨೫ ಶಾಸಕರನ್ನು ಹೊಂದಿದೆ. ಜಾರ್ಖಂಡ್‌ ವಿಕಾಸ್‌ ಮೋರ್ಚಾ-೨, ಎಜೆಎಸ್‌ಯು-೨, ಸಿಪಿಎಂಎಲ್‌-೧, ಎನ್‌ಸಿಪಿ-೧, ಪಕ್ಷೇತರ-೨ ಶಾಸಕರಿದ್ದಾರೆ.

ಬಿಜೆಪಿ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸೆಳೆದು ಪಕ್ಷೇತರರನ್ನು ಸೇರಿಸಿಕೊಂಡು ಸರಕಾರ ರಚಿಸುವ ಪ್ಲ್ಯಾನ್‌ ಹೊಂದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈಗ ಕಾಂಗ್ರೆಸ್‌ ಶಾಸಕರ ಕೈಯಲ್ಲಿ ಸಿಕ್ಕಿರುವುದು ಆಪರೇಷನ್‌ ಕಮಲದ ಭಾಗವಾದ ಹಣವೇ ಎನ್ನುವ ಸಂಶಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ| Jharkhand politics:16 ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದ ಜೆಎಂಎಂ ನಾಯಕ


Exit mobile version