ಮುಂಬೈ: ದೇಶದಲ್ಲಿ ಮಾವೋವಾದಿಗಳನ್ನು ನಿಗ್ರಹಿಸಲು ಪಣ ತೊಟ್ಟಿರುವ ಭದ್ರತಾ ಸಿಬ್ಬಂದಿಯು (Security Forces) ಪ್ರಸಕ್ತ ವರ್ಷದಲ್ಲಿ ಸಾಲು ಸಾಲಾಗಿ ಎನ್‌ಕೌಂಟರ್ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮತ್ತೆ ಮೂವರು ನಕ್ಸಲರನ್ನು (Naxals) ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಭದ್ರತಾ ಸಿಬ್ಬಂದಿಯು ಪ್ರಸಕ್ತ ವರ್ಷದಲ್ಲಿಯೇ 100ಕ್ಕೂ ಅಧಿಕ ನಕ್ಸಲರನ್ನು ಹತ್ಯೆ ಮಾಡಿದಂತಾಗಿದೆ. ಕೆಲ ದಿನಗಳ ಹಿಂದಷ್ಟೇ ಛತ್ತೀಸ್‌ಗಢದಲ್ಲಿ 12 ಮಾವೋವಾದಿಗಳನ್ನು ಹತ್ಯೆಗೈಯಲಾಗಿತ್ತು.
“ಗಡ್ಚಿರೋಲಿ ಜಿಲ್ಲೆಯ ಕಟ್ರಂಗಟ್ಟ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಗುಪ್ತಚರ ಮೂಲಗಳಿಂದ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡರು. ಭಾರಿ ಪ್ರಮಾಣದ ದಾಳಿ, ಅಕ್ರಮ ಚಟುವಟಿಕೆಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಲೇ ದಾಳಿ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ಮಹಿಳಾ ನಕ್ಸಲರು ಸೇರಿ ಒಟ್ಟು ಮೂವರನ್ನು ಹತ್ಯೆ ಮಾಡಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
23 ನಕ್ಸಲರ ಹತ್ಯೆ
ಏಪ್ರಿಲ್ 2ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 13 ಮಂದಿ ನಕ್ಸಲರು ಹತರಾಗಿದ್ದರು. ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರ ಭದ್ರತಾ ಪಡೆಗಳೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತರಾಗಿದ್ದರು. ಇದು 2024ರಲ್ಲಿ ನಡೆದ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಎನಿಸಿತ್ತು. ಇದಾದ ಕೆಲ ದಿನಗಳ ಬಳಿಕವೂ ಮೂವರು ನಕ್ಸಲರನ್ನು ಹತ್ಯೆಗೈಯಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ 10 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.
5 ತಿಂಗಳಲ್ಲಿ 100 ನಕ್ಸಲರ ಖತಂ
ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶುಕ್ರವಾರ ಹತ್ಯೆಗೈದ 12 ನಕ್ಸಲರು ಸೇರಿ ಪ್ರಸಕ್ತ ವರ್ಷದ ಐದು ತಿಂಗಳಲ್ಲಿ 100ಕ್ಕೂ ಅಧಿಕ ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Encounter: ದೇಶದ್ರೋಹಿ ಮಾವೋವಾದಿಗಳಿಗೆ ಹೊಡೆತ; ಎನ್‌ಕೌಂಟರ್‌ನಲ್ಲಿ 13 ನಕ್ಸಲರ ಹತ್ಯೆ