Site icon Vistara News

Rajiv Gandhi: ಭಾರತ ತೊರೆದ ರಾಜೀವ್‌ ಗಾಂಧಿ ಹಂತಕರು; ಅವರಿಗೆ ಭದ್ರತೆ ನೀಡಿದ್ದೇಕೆ?

Rajiv Gandhi Convicts

3 Rajiv Gandhi Assassination Case Convicts Sent Back To Sri Lanka

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi) ಹತ್ಯೆ ಪ್ರಕರಣದ ಮೂವರು ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಶ್ರೀಲಂಕಾಕ್ಕೆ ಕಳುಹಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ (Rajiv Gandhi) ರಾಜೀವ್‌ ಗಾಂಧಿ ಹಂತಕರಾದ ಮುರುಗನ್‌, ಜಯಕುಮಾರ್‌ ಹಾಗೂ ರಾಬರ್ಟ್‌ ಅವರನ್ನು ಶ್ರೀಲಂಕಾಕ್ಕೆ (Sri Lanka) ಸುರಕ್ಷಿತವಾಗಿ ಕಳುಹಿಸಲಾಗಿದೆ. ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರೂ ಅಪರಾಧಿಗಳು (Rajiv Gandhi Case Convicts) ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇವರನ್ನು 2022ರಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಎರಡು ವರ್ಷದ ಹಿಂದೆ ಮುರುಗನ್‌, ರಾಬರ್ಟ್‌ ಪಯಾಸ್‌ ಹಾಗೂ ಜಯಕುಮಾರ್‌ ಜೈಲಿನಿಂದ ಬಿಡುಗಡೆಯಾಗಿದ್ದರು. ಇವರನ್ನು ತಿರುಚ್ಚಿಯ ವಿಶೇಷ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಅನುಮತಿ ಮೇರೆಗೆ ಇವರನ್ನು ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರು ಶ್ರೀಲಂಕಾ ನಾಗರಿಕರಾಗಿರುವ ಕಾರಣ ಹಾಗೂ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ, ಬಿಡುಗಡೆಯಾಗಿರುವ ಕಾರಣ ದ್ವೀಪರಾಷ್ಟ್ರಕ್ಕೆ ಚೆನ್ನೈ ಏರ್‌ಪೋರ್ಟ್‌ನಿಂದ ವಾಪಸ್‌ ಕಳುಹಿಸಲಾಗಿದೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಳಿನಿ ಶ್ರೀಹರನ್‌ ಸೇರಿ ಆರು ಜನರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ 2022ರ ನವೆಂಬರ್‌ 12ರಂದು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ನಳಿನಿ ಶ್ರೀಹರನ್‌ ಜತೆಗೆ ಆಕೆಯ ಪತಿ ಮುರುಗನ್, ಸಂತನ್‌, ರಾಬರ್ಟ್, ಪಯಾಸ್ ಹಾಗೂ ಜಯಕುಮಾರ್ ಎಂಬುವರನ್ನು ತಮಿಳುನಾಡಿನ ಜೈಲುಗಳಿಂದ ಬಂಧಮುಕ್ತಗೊಳಿಸಲಾಗಿತ್ತು.

ಇದನ್ನೂ ಓದಿ: Ram Mandir: ರಾಮಮಂದಿರದ ‘ಕ್ರೆಡಿಟ್’‌ ರಾಜೀವ್‌ ಗಾಂಧಿಗೂ ನೀಡಿ; ಕಮಲ್‌ ನಾಥ್‌ ಆಗ್ರಹ!

ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ 1991ರ ಮೇ 21ರಂದು ಎಲ್‌ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬರ್ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಳಿನಿ ಶ್ರೀಹರನ್‌ ಸೇರಿ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ನವೆಂಬರ್ 11ರಂದು ಆದೇಶಿಸಿತ್ತು. ಇವರ ಬಿಡುಗಡೆಗೆ ರಾಜ್ಯ ಸರ್ಕಾರವು ಶಿಫಾರಸು ಮಾಡಿತ್ತು.

ಮಾಜಿ ಪ್ರಧಾನಿಯ ಹತ್ಯೆ ಪ್ರಕರಣದಲ್ಲಿ 31 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಯಾಗಿ ಬಂದ ನಳಿನಿ ಶ್ರೀಹರನ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. “ಜೈಲಿನಿಂದ ಹೊರಬಂದಿರುವುದು ನನಗೆ ಹೊಸ ಜೀವನ ಸಿಕ್ಕಂತಾಗಿದೆ” ಎಂದಿದ್ದರು. “ನಾನು ಸಾರ್ವಜನಿಕ ಜೀವನದಲ್ಲಿ ಇರುವುದಿಲ್ಲ. 30ಕ್ಕೂ ಅಧಿಕ ವರ್ಷಗಳಿಂದ ನನ್ನನ್ನು ಬೆಂಬಲಿಸಿದ ತಮಿಳಿಗರಿಗೆ ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸುತ್ತೇನೆ. ಇದು ನನಗೆ ಹೊಸ ಜೀವನ” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version