ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ (Kulgam Encounter) ವೇಳೆ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದ್ದು, ಇದೇ ವೇಳೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಶುಕ್ರವಾರ (ಜುಲೈ 4) ಸಂಜೆಯಿಂದಲೇ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಆರಂಭಿಸಿದೆ. ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದು, ತಡರಾತ್ರಿವರೆಗೆ ಶೋಧ ನಡೆದಿದೆ. ತಡರಾತ್ರಿ ಸೇನೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಗುಪ್ತಚರ ಮೂಲಗಳಿಂದ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದೆ. ಕಾರ್ಯಾಚರಣೆ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರು ಹುತಾತ್ಮರಾದರು” ಎಂದು ದೇಶದ ಸೇನೆಯ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಐವರು ಭಯೋತ್ಪಾದಕರ ಹತ್ಯೆಗೈದ ಸೆಕ್ಯುರಿಟಿ ಫೋರ್ಸ್
ಗಂಭೀರವಾಗಿ ಗಾಯಗೊಂಡಿದ್ದ ಯೋಧರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಅವರು ಹುತಾತ್ಮರಾದರು ಎಂದು ತಿಳಿದುಬಂದಿದೆ. ಶನಿವಾರ (ಜುಲೈ 5) ಬೆಳಗ್ಗೆಯೂ ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ಮಾಹಿತಿ ನೀಡಿದೆ.