ಬಿಹಾರ್ ಷರೀಫ್: 40 ಅಡಿ ಆಳ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವನ್ನು (Borewell Child Rescue) ರಕ್ಷಿಸಿದ ಘಟನೆ ಬಿಹಾರದ (Bihar) ನಳಂದಾ ಜಿಲ್ಲೆಯಲ್ಲಿ (Nalanda District) ನಡೆದಿದೆ. ಸುಮಾರು 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ಭಾನುವಾರ ರಕ್ಷಣೆ ಮಾಡಲಾಗಿದೆ. ಕೊಳವೆ ಬಾವಿಯಿಂದ ಹೊರ ತೆಗೆದ ಮಗುವನ್ನು ವೈದ್ಯಕೀಯ ತಪಾಸಣೆ ನಡೆಸಿ, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮಾನ್ಯವಾಗಿ ಆಳ ಕೊಳವೆ ಬಾವಿಗೆ ಬಿದ್ದ ಮಗವನ್ನು ಜೀವ ಸಹಿತ ರಕ್ಷಣೆ ಮಾಡಿದ ಘಟನೆಗಳು ವಿರಳ. ಹಾಗಾಗಿ, ಈ ಮಗು ಅದೃಷ್ಟವಶಾತ್ ಯಾವುದೇ ತೊಂದರೆಯಿಲ್ಲದೇ ಬದುಕಿ ಬಂದಿದೆ.
#WATCH : 3 Years Old Child Fell into Borewell in Kul Village, Child Rescued By NDRF Team at Nalanda, Bihar.#Nalanda #Bihar #NDRF #Borewell #ChildRescue #Rescue #BreakingNews #Breaking #LatestNews #latest #latestupdate #बिहार #नालंदा #BiharNews #EXCLUSIVE pic.twitter.com/sKFPIBATjC
— upuknews (@upuknews1) July 23, 2023
ಕೊಳವೆ ಬಾವಿಗೆ ಬಿದ್ದ ಮಗುವನ್ನು ದೊಮ್ಮನ್ ಮಾಂಝಿ ಎಂದು ಗುರುತಿಸಲಾಗಿದೆ. ಶಿವಂ ಕುಮಾರ್ ಎಂಬುವವರ ಪುತ್ರ. ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ವರ್ಧಮಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ವಿಮ್ಸ್)ಗೆ ದಾಖಲಿಸಲಾಗಿದೆ. ಮಗು ಸುಮಾರು 8 ಗಂಟೆಗಳ ಕಾಲ ಬೋರ್‌ವೆಲ್‌ನ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಆದ್ದರಿಂದ, ತಕ್ಷಣದ ವೈದ್ಯಕೀಯ ಆರೈಕೆಯು ನಿರ್ಣಾಯಕವಾಗಿತ್ತು. ಮಗು ಆರೋಗ್ಯ ಸ್ಥಿರ ಸ್ಥಿತಿಯಲ್ಲಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಗಂಟೆಗಳ ಕಾಲ ನಿಗಾ ಇರಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ತನ್ನ ಮನೆಯ ಪಕ್ಕದಲ್ಲೇ ಆಡವಾಡುತ್ತಾ ಮಗು ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿತ್ತು. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ನಳಂದಾ ಜಿಲ್ಲಾಡಳಿತವು ಪರಿಹಾರ ಕಾರ್ಯಾಚರಣೆಗೆ ಮುಂದಾಯಿತು. ಕೂಡಲೇ ಸ್ಥಳಕ್ಕೆ ಜೆಸಿಬಿ ಯಂತ್ರಗಳನ್ನು ತಂದು, ನೆಲವನ್ನು ಕೊರೆಯಲಾಯಿತು. ಪೈಪ್ ಮೂಲಕ ಮಗುವಿಗೆ ಆಕ್ಸಿಜಿನ್ ಸೈಪ್ಲೈ ಮಾಡಲಾಯಿತು. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಇಡೀ ಕಾರ್ಯಾಚರಣೆಯ ಮೇಲೆ ನಿಗಾವಹಿಸಲಾಯಿತು. ಮಗುವನ್ನು ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸಿದವು.
ಜಿಲ್ಲಾಧಿಕಾರಿ ಶಶಾಂಕ್ ಶುಭಾಂಕರ್ ಹಾಗೂ ಇತರ ಜಿಲ್ಲಾ ಅಧಿಕಾರಿಗಳ ತಂಡವು ಸ್ಥಳದಲ್ಲೇ ಬೀಡು ಬಿಟ್ಟಿತ್ತು. ಕಾರ್ಯಾಚರಣೆಯನ್ನು ಹತ್ತಿರದಿಂದ ಮಾನಿಟರ್ ಮಾಡಿತು. ಕಾರ್ಯಾಚರಣೆ ವೇಳೆ, ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕಾಗಿ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆ ಪೂರ್ತಿ ಮಗುವಿಗೆ ಆಕ್ಸಿಜಿನ್ ಪೂರೈಕೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Video: ಕೊಳವೆ ಬಾವಿಗೆ ಬಿದ್ದ ಮಗು, ಆಳಕ್ಕೇ ಹೋಗಿ ಅದನ್ನು ಎತ್ತಿಕೊಂಡು ಬಂದ ಯುವತಿ!; ರೋಮಾಂಚನವಿದು
ಸರಿಯಾದ ಸಮಯಕ್ಕೆ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದರ ಪರಿಣಾಮ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗು ಕೊಳವೆ ಬಾವಿಗೆ ಬಿದ್ದ ಘಟನೆ ಇಡೀ ಬಿಹಾರ ರಾಜ್ಯದ ಗಮನ ಸೆಳೆದಿತ್ತು. ಮಗು ಸುರಕ್ಷಿತವಾಗಿ ರಕ್ಷಣೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ನಿಟ್ಟುಸಿರುವ ಬಿಟ್ಟರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.