Site icon Vistara News

Terrorists Killed: ಕಾಶ್ಮೀರದಲ್ಲಿ ಈ ವರ್ಷ 31 ಉಗ್ರರ ಹತ್ಯೆಗೈದ ಸೇನೆ; ಲಿಸ್ಟ್‌ನಲ್ಲಿ ಇನ್ನೆಷ್ಟು ಉಗ್ರರಿದ್ದಾರೆ?

Kulgam

Terrorist killed in fresh gunfight with security forces in Jammu Kashmir's Kulgam

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹಕ್ಕಾಗಿ ಭಾರತೀಯ ಸೇನೆಯು ಸತತವಾಗಿ ಕಾರ್ಯಾಚರಣೆ ಕೈಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ, ಪಾಕಿಸ್ತಾನವು ಗಡಿ ಮೂಲಕ ಉಗ್ರರನ್ನು ಕಳುಹಿಸುವ ಕಾರಣದಿಂದಾಗಿ ಗಡಿಯಲ್ಲಿ ಕಟ್ಟೆಚ್ಚರ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಎನ್‌ಕೌಂಟರ್‌, ಉಗ್ರರನ್ನು ಮಟ್ಟಹಾಕಲು ಡ್ರೋನ್‌ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಾರೆ. ಜಮ್ಮು-ಕಾಶ್ಮೀರ ಪೊಲೀಸರೂ (Jammu Kashmir Police) ಸೈನಿಕರ ಕಾರ್ಯಾಚರಣೆಗಳಿಗೆ ನೆರವು ನೀಡುತ್ತಾರೆ. ಹೀಗೆ 2023ರ ಜನವರಿ 1ರಿಂದ ಸೆಪ್ಟೆಂಬರ್‌ 26ರವರೆಗೆ ಜಮ್ಮು-ಕಾಶ್ಮೀರದಲ್ಲಿ 31 ಉಗ್ರರನ್ನು ಸೇನೆ, ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ (Terrorists Killed) ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ ಪೊಲೀಸರು, ಇಂಡಿಯನ್‌ ಆರ್ಮಿ ಹಾಗೂ ಸಶಸ್ತ್ರ ಸೀಮಾ ದಳದ ಜಂಟಿ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಹತ್ಯೆಗೀಡಾಗಿದ್ದಾನೆ. ಹಾಗೆಯೇ, ಜಮ್ಮು-ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಹಾಗೂ ಬಿಎಸ್‌ಎಫ್‌ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು, ಜಮ್ಮು-ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಹಾಗೂ ಸಿಆರ್‌ಪಿಎಫ್‌ ಕಾರ್ಯಾಚರಣೆಯಲ್ಲಿ ಐವರು ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಕಾರ್ಯಾಚರಣೆಯಲ್ಲಿ 23 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

204 ಉಗ್ರರ ಬಂಧನ

ಕಣಿವೆಯಲ್ಲಿ ಉಗ್ರರ ಬಂಧನದಲ್ಲೂ ಸೇನೆ ಮುಂದಿದೆ. ಕಳೆದ 9 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ 204 ಉಗ್ರರನ್ನು ಬಂಧಿಸಲಾಗಿದೆ. ಕಳೆದ ತಿಂಗಳಲ್ಲಿಯೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿದರೆ, 40 ಉಗ್ರರನ್ನು ಬಂಧಿಸಲಾಗಿದೆ. ಇವರಿಂದ ಎಕೆ 47 ಗನ್‌, ಮ್ಯಾಗಜಿನ್‌, ಪಿಸ್ತೂಲ್‌, ಗ್ರನೇಡ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ

111 ಉಗ್ರರೇ ಸೇನೆಯ ಗುರಿ

ಜಮ್ಮು-ಕಾಶ್ಮೀರದಲ್ಲಿ 31 ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Exit mobile version