ಮುಂಬೈ: ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಪೇದೆಯೊಬ್ಬರು ಏಕಾಏಕಿ ಗುಂಡಿನ ದಾಳಿ (RPF Firing) ನಡೆಸಿದ್ದು, ಆರ್‌ಪಿಎಫ್ ಎಎಸ್‌ಐ ಹಾಗೂ ಮೂವರು ಪ್ರಯಾಣಿಕರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಆರ್‌ಪಿಎಫ್ ಪೇದೆಯನ್ನು ಚೇತನ್ ಸಿಂಗ್ ಎಂದು ಗುರುತಿಸಲಾಗಿದ್ದು, ಮುಂಬೈ ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಾಪಿ ರೈಲು ನಿಲ್ದಾಣ ಹಾಗೂ ಬೋರಿವಲಿ ರೈಲು ನಿಲ್ದಾಣದ ಮಧ್ಯೆ ರೈಲು ಸಂಚರಿಸುತ್ತಿದ್ದಾಗ ಆರ್‌ಪಿಎಫ್ ಪೇದೆಯು ಎಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಾದ ಬಳಿಕ ಮೂವರು ಪ್ರಯಾಣಿಕರ ಮೇಲೂ ಆತ ಗುಂಡಿನ ದಾಳಿ ನಡೆಸಿದ್ದಾರೆ. ಮೃತ ಎಎಸ್‌ಐ ಅವರನ್ನು ಟೀಕಾ ಶರ್ಮಾ ಎಂಬುದಾಗಿ ಗುರುತಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಜೈಪುರ ಎಕ್ಸ್‌ಪ್ರೆಸ್ ರೈಲಿನ ಬಿ 5 ಬೋಗಿಯಲ್ಲಿ ಪೇದೆಯು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. “ರೈಲ್ವೆ ರಕ್ಷಣಾ ಪಡೆ ಪೇದೆಯು ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಎಎಸ್‌ಐ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಆರ್‌ಪಿಎಫ್ ತಿಳಿಸಿದೆ.
ಇದನ್ನೂ ಓದಿ: Viral Video: ರೈಲು ನಿಲ್ದಾಣದಲ್ಲಿ ಬಾಲಕನಿಗೆ ಒದ್ದು, ತುಳಿದ ಪೊಲೀಸ್ ಪೇದೆ; ನಿಮಗೆ ಮಕ್ಕಳಿಲ್ಲವೇ ಎಂದ ಜನ
ಚೇತನ್ ಸಿಂಗ್ ಅವರನ್ನು ಎಸ್ಕಾರ್ಟ್‌ಗಾಗಿ ನಿಯೋಜಿಸಲಾಗಿತ್ತು. ಅವರೇಕೆ ತಮ್ಮ ಸರ್ವಿಸ್ ಗನ್ ತೆಗೆದು ಗುಂಡಿನ ದಾಳಿ ನಡೆಸಿದರು ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ಮಾಡುತ್ತಲೇ ಆತ ರೈಲಿನಿಂದ ಹೊರಗೆ ಜಿಗಿದಿದ್ದಾರೆ. ಬಳಿಕ ಆರ್‌ಪಿಎಫ್ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.