ಹೊಸದಿಲ್ಲಿ: ಕೇಂದ್ರ ಸರಕಾರವು ತನ್ನ ಒಂದು ಕೋಟಿಗೂ ಅಧಿಕ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (Dearness Allowance) ಶೇಕಡಾ 4ರಷ್ಟು ಹೆಚ್ಚಿಸಿದೆ.
ಅದೀಗ ಒಟ್ಟು ಶೇಕಡಾ 38ರಿಂದ ಶೇಕಡಾ 42ಕ್ಕೆ ಏರಿದೆ. ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳಕ್ಕೆ ಕೇಂದ್ರವು ₹ 12,815 ಕೋಟಿ ವೆಚ್ಚ ಮಾಡಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುತ್ತದೆ. ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಡಿಎ ಹೆಚ್ಚಳವನ್ನು ಜನವರಿ 1, 2023ರಿಂದ ಪೂರ್ವಾನ್ವಯವಾಗಿ ಅನ್ವಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.
“… ಇದು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದೆ” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರವು ಈ ಹಿಂದೆ ಸೆಪ್ಟೆಂಬರ್ 2022ರಲ್ಲಿ ತುಟ್ಟಿಭತ್ಯೆಯನ್ನು ಪರಿಷ್ಕರಿಸಿದೆ. ಆ ಬಾರಿಯೂ ಅದನ್ನು ಶೇಕಡಾ 4 ಏರಿಸಲಾಗಿತ್ತು. ಡಿಎಯನ್ನು ನಿಯತಕಾಲಿಕವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.
ಇದನ್ನೂ ಓದಿ: GOOD NEWS: ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಜುಲೈನಲ್ಲಿ ಏರಿಕೆ ಸಾಧ್ಯತೆ