Site icon Vistara News

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

4 state election results shows us that, freebies are not the way for win elections

2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ವಿಶ್ಲೇಷಿಸಲಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ (Assembly Elections 2023) ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ (ಡಿಸೆಂಬರ್‌ 3) ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಒಂದು ರಾಜ್ಯವನ್ನು ಗೆದ್ದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗದ್ದುಗೆ ಏರಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಬಿಜೆಪಿ ಮಧ್ಯಪ್ರದೇಶವನ್ನು ಉಳಿಸಿಕೊಂಡು ರಾಜಸ್ಥಾನ ಮತ್ತು ಛತ್ತೀಸ್‌ ಗಢವನ್ನು ಕಾಂಗ್ರೆಸ್‌ ಕೈಯಿಂದ ಕಸಿದುಕೊಂಡಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತೆಲಂಗಾಣದಲ್ಲಿ 10 ವರ್ಷಗಳ ಕೆ ಚಂದ್ರಶೇಖರ ರಾವ್‌ (ಭಾರತ ರಾಷ್ಟ್ರ ಸಮಿತಿ- ಬಿಆರ್‌ಎಸ್‌) ಪಾರುಪತ್ಯವನ್ನು ಕೊನೆಗಾಣಿಸಿದೆ. ಈ ಫಲಿತಾಂಶಗಳು ನೀಡುತ್ತಿರುವ ಸಂದೇಶವನ್ನು ನಾವು ವಿಶ್ಲೇಷಿಸಬಹುದಾಗಿದೆ(Vistara editorial).

ಮೂರು ರಾಜ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಉತ್ತರ ಭಾರತದಲ್ಲಿ ಬಿಜೆಪಿ ತನ್ನ ಪಾರಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರೆ, ಕಾಂಗ್ರೆಸ್‌ ತೆಲಂಗಾಣದ ಗೆಲುವಿನ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಗ್ಯಾರಂಟಿಗಳ ಪ್ರಭಾವದಿಂದ ಕಾಂಗ್ರೆಸ್‌ ದೊಡ್ಡ ಗೆಲುವನ್ನು ಸಾಧಿಸಿದ ಬಳಿಕ ಗೊಂದಲದಲ್ಲಿ ಮುಳುಗಿದ್ದ ಬಿಜೆಪಿಗೆ ಈ ಚುನಾವಣೆ ಫಲಿತಾಂಶ ಧೈರ್ಯವನ್ನು ತುಂಬಿದೆ. ಇದು ಬಿಜೆಪಿಯ 2024ರ ಲೋಕಸಭಾ ಚುನಾವಣಾ ಓಟಕ್ಕೆ ಎದುರಾಗಿದ್ದ ಆತಂಕವನ್ನು ದೂರ ಮಾಡಿದೆ. ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲೇ 65 ಸ್ಥಾನಗಳಿವೆ. ಇದು ಬಹುತೇಕ ಸಾರಾಸಗಟು ಬಿಜೆಪಿ ಪಕ್ಷಕ್ಕೆ ಬರುವ ಸಾಧ್ಯತೆಗಳು ಕಂಡುಬರುತ್ತಿವೆ.

ಇತ್ತೀಚೆಗೆ ಕಾಂಗ್ರೆಸ್ ನೀಡುತ್ತಿರುವ ಉಚಿತ ಗ್ಯಾರಂಟಿಗಳು ಹೆಚ್ಚು ಚರ್ಚಿತವಾಗಿವೆ. ಇವುಗಳಿಂದಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದರಲ್ಲಿ ಭಾಗಶಃ ಸತ್ಯವಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದುದರ ಹಿಂದೆ ಬಿಜೆಪಿಯ ಕಳಪೆ ಆಡಳಿತದ ಬಗ್ಗೆ ಎದ್ದ ಆಕ್ರೋಶವೂ ಕಾರಣವಾಗಿತ್ತು. ಈಗಲೂ ಅದೇ ಸಂಭವಿಸಿದೆ. ಅಂದರೆ, ಗ್ಯಾರಂಟಿಗಳೇ ಎಲ್ಲವೂ ಅಲ್ಲ ಎಂಬುದನ್ನು ಇದು ಸಾರಿದೆ. ಬಿಜೆಪಿ ಕೂಡಾ ಕಾಂಗ್ರೆಸ್‌ನಂತೆಯೇ ಕೆಲವೊಂದು ಉಚಿತ ಯೋಜನೆಗಳನ್ನು ನೀಡಿದ್ದರೂ ಒಟ್ಟಾರೆ ಫಲಿತಾಂಶ ಗ್ಯಾರಂಟಿ ಯೋಜನೆಗಳ ಹಂಗನ್ನು ಮೀರಿ ನಿಂತಿದೆ. ಮತದಾರರು ಗ್ಯಾರಂಟಿಗಳ ಆಮಿಷವನ್ನು ಮೀರಿ ಮತ ಹಾಕಿದ್ದಾರೆ. ಅಂದರೆ ಉತ್ತಮ ಆಡಳಿತವನ್ನು ಅಪೇಕ್ಷಿಸಿದ್ದಾರೆ ಎಂಬುದು ನಿಶ್ಚಿತ. ಉಚಿತಗಳು ಎಕಾನಮಿಗೆ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಹೇಳುತ್ತಾರೆ. ಮತದಾರರು ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳಿದಂತಿದೆ. ಇಲ್ಲವಾದರೆ ಮೂರೂ ಕಡೆ ಕಾಂಗ್ರೆಸ್ ವಿಫಲವಾಗುತ್ತಿರಲಿಲ್ಲ. ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ನಿಜ. ಆದರೆ ಹತ್ತು ವರ್ಷಗಳ ಬಿಆರ್‌ಎಸ್ ಆಡಳಿತ ಸಾಕಾಗಿ ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಎಂಬುದೂ ಅಷ್ಟೇ ನಿಜ.

ಬಿಜೆಪಿ ಈ ಫಲಿತಾಂಶವನ್ನು ಸಹಜವಾಗಿಯೇ ಹುಮ್ಮಸ್ಸಿನಿಂದ ಸ್ವೀಕರಿಸಿದೆ. ಅದು ಸಹಜ. ಇದು ಲೋಕಸಭೆ ಚುನಾವಣೆಯ ಮುನ್ಸೂಚನೆಯೂ ಹೌದು. ಆದರೆ ದುರಾಡಳಿತ, ಕಳಪೆ ಆಡಳಿತವನ್ನು ಜನ ಸಹಿಸುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಆಡಳಿತದಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆದಿದ್ದವು. ಜನತೆ ಸರ್ಕಾರವನ್ನು ಬದಲಿಸಿದ್ದಾರೆ. ಇದು ಬಿಜೆಪಿಗೂ ಪಾಠ. ಮೂರೂ ರಾಜ್ಯಗಳಲ್ಲೂ ಬುಡಕಟ್ಟು ಸಮುದಾಯ ಬಿಜೆಪಿಯ ಕೈಹಿಡಿದಿದೆ. ಇದು ತನ್ನ ಆದ್ಯತೆ ಎಲ್ಲಿಗೆ ಇರಬೇಕೆಂದು ಬಿಜೆಪಿಗೆ ತೋರಿಕೊಟ್ಟಿದೆ. ಕೇಂದ್ರದ ಅಭಿವೃದ್ಧಿ ಯೋಜನೆಗಳು ಮತ ಬಿಜೆಪಿಗೆ ಸಹಾಯ ಮಾಡಿವೆ. ಮುಖ್ಯವಾಗಿ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಜನಪರ ಯೋಜನೆಗಳು, ಕೇಂದ್ರ ರಾಜ್ಯ ಡಬಲ್ ಎಂಜಿನ್ ಸರ್ಕಾರದ ಎಫೆಕ್ಟ್, ಮೋದಿ ಹವಾ ಕೂಡ ಕೆಲಸ ಮಾಡಿದೆ.

ಗೆಲುವಿನ‌ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಅದರ ನೇತೃತ್ವದ ಇಂಡಿಯಾ ಬ್ಲಾಕ್‌ಗೆ ನಿರಾಸೆ ಆಗಿರುವುದು ಸಹಜ. ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ, ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಉಚಿತ ಯೋಜನೆಗಳಿಗಿಂತಲೂ ಖಚಿತ ಅಭಿವೃದ್ಧಿ ಯೋಜನೆಗಳತ್ತ ಹೆಚ್ಚಿನ ಹರಿಸಬೇಕು. ನಾಯಕತ್ವದ ವಿಚಾರದಲ್ಲಿ ಇನ್ನಷ್ಟು ಪ್ರಯೋಗ, ಗಟ್ಟಿತನ ಬೇಕಾದೀತು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Exit mobile version