ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು (ISIS Terrorists) ಬಂಧಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Ahmedabad Airport) ಎಟಿಸ್ ಸಿಬ್ಬಂದಿಯು ಶ್ರೀಲಂಕಾದ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗಲೇ ಅವರನ್ನು ಬಲೆಗೆ ಹಾಕಿದ್ದಾರೆ. ನಾಲ್ವರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ವರನ್ನೂ ಬಂಧಿಸುತ್ತಲೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಎಟಿಎಸ್ ಸಿಬ್ಬಂದಿಯು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ಏನು ಮಾಡುತ್ತಿದ್ದರು? ಅವರು ರೂಪಿಸಿದ ಸಂಚೇನು? ಎಲ್ಲಿಗೆ ಹೋಗುವವರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ ಪಂದ್ಯಗಳು ನಡೆಯುವ ಕೆಲವೇ ಗಂಟೆಗಳ ಮೊದಲೇ ಉಗ್ರರನ್ನು ಬಂಧಿಸಿರುವುದು ಪ್ರಾಮುಖ್ಯತೆ ಪಡೆದಿದೆ.
Four ISIS terrorists, who are Sri Lankan nationals, arrested at Ahmedabad airport: Gujarat ATS pic.twitter.com/pTHwPlZfnM
— ANI (@ANI) May 20, 2024
ಮೊದಲ ಕ್ವಾಲಿಫೈಯರ್ ಪಂದ್ಯ ಮಂಗಳವಾರ (ಮೇ 21) ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಬುಧವಾರ (ಮೇ 22) ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯವೂ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಿಂದಾಗಿ ಅಹಮದಾಬಾದ್‌ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದರ ಮಧ್ಯೆಯೇ, ಏರ್‌ಪೋರ್ಟ್‌ನಲ್ಲಿ ನಾಲ್ವರು ಉಗ್ರರ ಬಂಧನವಾಗಿದೆ.
#WATCH | Ahmedabad: Gujarat ATS arrests four ISIS terrorists at Ahmedabad airport. All four accused are Sri Lankan nationals. https://t.co/5kkwHjK9Gd pic.twitter.com/vbhh3esN7A
— ANI (@ANI) May 20, 2024
ಮೇ 12ರಂದು ಬಾಂಬ್ ಬೆದರಿಕೆ
ಮೇ 12ರಂದು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಬೆದರಿಕೆಯ ಮೇಲ್ ಬರುತ್ತಲೇ ಭದ್ರತಾ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿತ್ತು. ಇಡೀ ವಿಮಾನ ನಿಲ್ದಾನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳಿಗಾಗಿ ಇನ್ನಿಲ್ಲದಂತೆ ಪರಿಶೀಲನೆ ನಡೆಸಲಾಗಿತ್ತು. ಹಾಗಾಗಿ, ಉಗ್ರರ ಬಂಧನವು ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.