ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಹೆಣ್ಣುಮಕ್ಕಳ ಸುರಕ್ಷತೆ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಸುದ್ದಿಗಳು ಸಾಮಾನ್ಯ ಎಂಬಂತಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯ ಪಾಂಡವ ನಗರದಲ್ಲಿ 34 ವರ್ಷದ ಮೊಹಮ್ಮದ್ ಎಂಬಾತ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Physical Abuse) ಎಸಗಿದ್ದಾನೆ. ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾಂಡವ ನಗರದಲ್ಲಿ ಬಾಲಕಿಯು ಟ್ಯೂಷನ್‌ಗೆ ತೆರಳಿದ್ದಾಳೆ. ಟ್ಯೂಷನ್‌ನಲ್ಲಿ ಟೀಚರ್ ಇಲ್ಲದ ಕಾರಣ ಆಕೆ ಸುಮ್ಮನೆ ಕುಳಿತಿದ್ದಾಳೆ. ಇದೇ ವೇಳೆ ಟ್ಯೂಷನ್ ಸೆಂಟರ್‌ನಲ್ಲಿದ್ದ ಟೀಚರ್ ಸಹೋದರನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿಯನ್ನು ಹೆದರಿಸಿದ ಆತ, ಯಾರಿಗೂ ಈ ಕುರಿತು ಹೇಳಬಾರದು ಎಂದು ತಾಕೀತು ಮಾಡಿದ್ದಾನೆ. ಬಾಲಕಿಯು ಅಳುತ್ತ ಮನೆಗೆ ಬಂದಾಗ ಕೃತ್ಯ ಬಹಿರಂಗವಾಗಿದೆ. ಶನಿವಾರ (ಮಾರ್ಚ್ 23) ಬಾಲಕಿಯ ಪೋಷಕರು ಮಾಂಡವಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
#WATCH | Delhi: People protested and vandalised cars in the Pandav Nagar area after a 4-year-old girl was allegedly raped by a man at her tuition centre. https://t.co/xNaRoxHOFv pic.twitter.com/AnmmlN9wIT
— ANI (@ANI) March 24, 2024
“ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಕೆಯ ಪೋಷಕರು ಮಾಂಡವಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 34 ವರ್ಷದ ಮೊಹಮ್ಮದ್ ಅಪ್ಪು ಎಂಬಾತನು ಅತ್ಯಾಚಾರ ಎಸಗಿದ್ದಾನೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೊಹಮ್ಮದ್‌ನನ್ನು ಬಂಧಿಸಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್ ಸಿಂಗ್ ಮಾಹಿತಿ ನೀಡಿದ್ದಾರೆ. ಬಾಲಕಿಯ ಗುಪ್ತಾಂಗದಲ್ಲಿ ಬಾವು ಕಾಣಿಸಿಕೊಂಡಿದ್ದನ್ನು ಗಮನಿಸಿದ ಪೋಷಕರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಬಾಲಕಿಗೆ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Physical Abuse : ಮನೆಯಲ್ಲಿ ಒಬ್ಬಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಜನರಿಂದ ಪ್ರತಿಭಟನೆ, ಕಾರುಗಳು ಧ್ವಂಸ
ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬ ಪ್ರಕರಣ ಬಯಲಾಗುತ್ತಲೇ ಪಾಂಡವ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬಾಲಕಿಯ ಸಂಬಂಧಿಕರು ಸೇರಿ ನೂರಾರು ಜನ ಪೊಲೀಸ್ ಠಾಣೆ ಸೇರಿ ಹಲವೆಡೆ ಪ್ರತಿಭಟನೆ ನಡೆಸಿದ್ದು, ಕಾರುಗಳನ್ನು ಧ್ವಂಸಗೊಳಿಸಿದ್ದಾರೆ. ಆರೋಪಿ ಅರ್ಮಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ