Site icon Vistara News

Onion Export: ಈರುಳ್ಳಿ ರಫ್ತು ಮೇಲೆ ಶೇ.40ರಷ್ಟು ಸುಂಕ ವಿಧಿಸಿದ ಸರ್ಕಾರ! ಬೆಲೆ ಏರಿಕೆ ತಡೆಯಲು ಕ್ರಮ

onion

ನವದೆಹಲಿ: ಟೊಮೆಟೋ ಬೆಲೆ ಏರಿಕೆಯಿಂದ (Tomato Price) ಬಸವಳಿದಿದ್ದ ಜನರಿಗೆ ಈರುಳ್ಳಿ ಬೆಲೆ (Onion Price) ಏರಿಕೆ ಕೂಡ ನಿಧಾನವಾಗಿ ತಟ್ಟಲಾರಂಭಿಸಿತ್ತು. ಈ ಬೆಳವಣಿಗೆಯನ್ನು ಗಮನಿಸಿರುವ ಕೇಂದ್ರ ಸರ್ಕಾರವು(Central Government), ಏರುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೂ ಈರುಳ್ಳಿ ರಫ್ತು ಮೇಲೆ ಶೇ.40ರಷ್ಟು ಸುಂಕ ವಿಧಿಸಿದೆ(40% Duty On Onion Export).

ಡಿಸೆಂಬರ್ 31ರ ವರೆಗೂ ಈರುಳ್ಳಿ ರಫ್ತು ಮೇಲೆ ಶೇ.40 ಸುಂಕ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ. ಸುಂಕ ಏರಿಕೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.

ಪ್ರಸಕ್ತ ತಿಂಗಳಲ್ಲಿ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮುಂಬರುವ ಸೆಪ್ಟೆಂಬರ್‌ ತಿಂಗಳಲ್ಲಿ ಬೆಲೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಮೇಲೆ ತನ್ನ ಸುಂಕಾಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಕೂಡ ಬರಲಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಕೂಡ ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಸರ್ಕಾರವು, ಸಾಧ್ಯವಾದಷ್ಟು ಬೆಲೆ ನಿಯಂತ್ರಣ ಮಾಡಲು ಮುಂದಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲ ಬೆಲೆ ಕೂಡ ಇಳಿಕೆಯಾಗಲಿದೆ.

ಇತ್ತೀಚೆಗಷ್ಟೇ ಟೊಮೆಟೊ ಬೆಲೆ ಏರಿಕೆ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಕಳೆದ ವಾರದಿಂದ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಈರುಳ್ಳಿ ಮತ್ತು ಆಲೂ ಸತತವಾಗಿ ಏರಿಕೆಯಾಗುತ್ತಿವೆ ಎಂಬ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಗುರುವಾರದ ವಾರ್ತಾಪತ್ರದಲ್ಲಿ ತಿಳಿಸಿದೆ.

ಮತ್ತೆ ದುಬಾರಿ ದುನಿಯಾ… 15 ತಿಂಗಳ ಗರಿಷ್ಠ ಮಟ್ಟಕ್ಕೆ ಹಣದುಬ್ಬರ ಏರಿಕೆ!

ಭಾರತದ ಆರ್ಥಿಕಾಭಿವೃದ್ಧಿ (Indian Economy) ಏರುಗತಿಯಲ್ಲಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಈ ವಿಶ್ಲೇಷಣೆಗಳಿಗೆ ವಿರುದ್ಧವಾದ ಬೆಳವಣಿಗೆ ಘಟಿಸಿದೆ. ಭಾರತೀಯ ಚಿಲ್ಲರೆ ಹಣದುಬ್ಬರವು (Retail Inflation) ಜುಲೈನಲ್ಲಿ ಶೇ.7.44ಕ್ಕೆ ಏರಿಕೆಯಾಗಿದೆ. ಕಳೆದ 15 ತಿಂಗಳಲ್ಲೇ ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ. ಅರ್ಥಾತ್, ಭಾರತದಲ್ಲಿ ಮತ್ತೆ ದುಬಾರಿ ದುನಿಯಾ(Food Prices Spike) ಶುರುವಾಗಿದೆ. ಭಾರತದ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ.4.81ರಿಂದ ವಾರ್ಷಿಕ ಆಧಾರದ ಮೇಲೆ ಜುಲೈನಲ್ಲಿ ಶೇ.7.44ಕ್ಕೆ ಏರಿದೆ. ಕೇಂದ್ರ ಸಾಂಖೀಕ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿಯನ್ನು ವಿವರಿಸಲಾಗಿದೆ.

2022ರ ಮೇ ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರವು ಈಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದು ಶೇ.7.79ರಷ್ಟು ದಾಖಲಾಗಿತ್ತು. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಜೂನ್‌ನಲ್ಲಿ ಶೇ 4.49ರಿಂದ ಶೇ 11.51ಕ್ಕೆ ಏರಿದೆ. ಗ್ರಾಮೀಣ ಹಣದುಬ್ಬರವು ಶೇ.7.63 ರಷ್ಟಿದ್ದರೆ, ನಗರ ಹಣದುಬ್ಬರವು ಶೇ.7.20 ರಷ್ಟಿದೆ.

ತರಕಾರಿ ಬೆಲೆ ನಿರಂತರ ಏರಿಕೆ

ತರಕಾರಿಗಳ ಹಣದುಬ್ಬರ ದರವು ತೀವ್ರ ಹೆಚ್ಚಳವನ್ನು ಕಂಡಿದೆ. 0.93 ಪ್ರತಿಶತದ ಸಂಕೋಚನದ ವಿರುದ್ಧ 37.34 ಪ್ರತಿಶತಕ್ಕೆ ಏರಿಕೆಯಾಗಿದೆ. ಆಹಾರ ಮತ್ತು ಪಾನೀಯಗಳ ಹಣದುಬ್ಬರ ಮಟ್ಟವು ಶೇ.4.63 ರಿಂದ ಶೇ.10.57 ಕ್ಕೆ ಏರಿದೆ. ಧಾನ್ಯಗಳ ಹಣದುಬ್ಬರ ದರವು ಜೂನ್‌ನಲ್ಲಿ ಶೇ.12.71 ರಿಂದ ಶೇ.13.04 ಕ್ಕೆ ಏರಿಕೆಯಾಗಿದೆ. ಇಂಧನ ಮತ್ತು ಲೈಟ್ ವಿಭಾಗದ ಹಣದುಬ್ಬರ ಕೂಡ ಶೇ.3.67ಕ್ಕೆ ಹೆಚ್ಚಳ ಕಂಡಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version