ಲಖನೌ: ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ಗಳಾದ ಅತೀಕ್ ಅಹ್ಮದ್ (Atiq Ahmed) ಹಾಗೂ ಅಶ್ರಫ್ ಅಹ್ಮದ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇವರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ಗುಂಡಿನ ದಾಳಿ ನಡೆಸಿದ ಲವಲೇಶ್, ಅರುಣ್ ಮೌರ್ಯ ಹಾಗೂ ಸನ್ನಿ ವಿರುದ್ಧ 400ಕ್ಕೂ ಅಧಿಕ ಕೇಸ್‌ಗಳಿವೆ. ಕೊಲೆ ಪ್ರಕರಣಗಳೂ ದಾಖಲಾಗಿವೆ. ಅಷ್ಟೇ ಏಕೆ, ಸುಂದರ್ ಭಾಟಿ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಈ ಮೂವರು ಆರೋಪಿಗಳು ಯಾರು? ಇವರ ಹಿನ್ನೆಲೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ.
ಲವಲೇಶ್ ತಿವಾರಿ
22 ವರ್ಷದ ಲವಲೇಶ್ ತಿವಾರಿ ವಿರುದ್ಧ 406 ಪ್ರಕರಣ ದಾಖಲಾಗಿವೆ. ದರೋಡೆ, ಜಗಳ ಸೇರಿ ಹಲವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಇವನ ತಂದೆ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಾಂಡಾದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಲವಲೇಶ್ ತಂದೆಯು ಸರಳ ವ್ಯಕ್ತಿತ್ವದವರಾಗಿದ್ದು, ಸಾಧು ಎಂಬ ಹೆಸರು ಗಳಿಸಿದ್ದಾರೆ. ಇನ್ನು ಲವಲೇಶ್ ಸಹೋದರರು ಅರ್ಚಕರಾಗಿದ್ದಾರೆ. ಆದರೆ, ಲವಲೇಶ್ ಮಾತ್ರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. “ನನ್ನ ಮಗನ ಕೃತ್ಯಗಳ ಬಗ್ಗೆ ಗೊತ್ತಿಲ್ಲ. ಆದರೆ, ಆತ ಡ್ರಗ್ ಅಡಿಕ್ಟ್” ಎಂದು ಲವಲೇಶ್ ತಂದೆ ಯಜ್ಞ ತಿವಾರಿ ಮಾಹಿತಿ ನೀಡಿದ್ದಾರೆ.
ಮೋಹಿತ್ ಅಲಿಯಾಸ್ ಸನ್ನಿ
ಉತ್ತರ ಪ್ರದೇಶದ ಭಯಂಕರ ಗ್ಯಾಂಗ್ ಆಗಿರುವ, ದುಷ್ಕೃತ್ಯಗಳಲ್ಲಿ ತೊಡಗಿರುವ ಸುಂದರ್ ಭಾಟಿ ಜತೆ ಮೋಹಿತ್ ಅಲಿಯಾಸ್ ಸನ್ನಿ ಗುರುತಿಸಿಕೊಂಡಿದ್ದಾನೆ. 23 ವರ್ಷದ ಸನ್ನಿ ಕುರಾರ ನಿವಾಸಿಯಾಗಿದ್ದು, ಈತನದ್ದೂ ಬಡತನದ ಹಿನ್ನೆಲೆಯುಳ್ಳ ಕುಟುಂಬವಾಗಿದೆ. ಸನ್ನಿಯು ಎಲ್ಲರಂತೆಯೇ ಇದ್ದ. ಆದರೆ, ಜಗಳವೊಂದರಲ್ಲಿ ಈತ ಜೈಲಿಗೆ ಹೋಗಿ ಬಂದ ಬಳಿಕ ಸಂಪೂರ್ಣವಾಗಿ ಬದಲಾಗಿ, ಸುಂದರ್ ಭಾಟಿ ಗ್ಯಾಂಗ್ ಜತೆ ಗುರುತಿಸಿಕೊಂಡಿದ್ದಾನೆ. ನಾವು ಸನ್ನಿಯ ಜತೆ ಸಂಪರ್ಕದಲ್ಲಿ ಇಲ್ಲ, ಆತನ ಕೃತ್ಯಗಳ ಬಗ್ಗೆ ಗೊತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅರುಣ್ ಮೌರ್ಯ
ಕೇವಲ 18 ವರ್ಷದ ಅರುಣ್ ಮೌರ್ಯ ವಿರುದ್ಧ ಕೊಲೆ ಸೇರಿ ಮೂರಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ. ಜಿಆರ್‌ಪಿ ಪೇದೆಯನ್ನೇ ಕೊಂದ ಆರೋಪ ಇವನ ಮೇಲಿದೆ. ಕಾಸ್‌ಗಂಜ್ ನಿವಾಸಿಯಾಗಿದ್ದ ಈತನ ಕುಟುಂಬಸ್ಥರು ಗುಜರಿ ವ್ಯಾಪಾರ ಮಾಡಿಕೊಂಡಿದ್ದಾರೆ. ಇವನ ಅಪರಾಧ ಕೃತ್ಯಗಳ ಬಗ್ಗೆಯೂ ಕುಟುಂಬಸ್ಥರಿಗೆ ಮಾಹಿತಿ ಇಲ್ಲ. ತುಂಬ ಚಿಕ್ಕವನಿದ್ದಾಗಲೇ ಮನೆ ಬಿಟ್ಟು ಹೋಗಿ, ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.
ಹತ್ಯೆಗೆ ಟರ್ಕಿಯ ಬಂದೂಕುಗಳ ಬಳಕೆ
ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಮೇಲೆ ಟರ್ಕಿಯ ಜಿಗಾನ ಬಂದೂಕಿನಿಂದ ಮೂವರೂ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಟರ್ಕಿಯ ಈ ಬಂದೂಕುಗಳನ್ನು ಭಾರತದಲ್ಲಿ ನಿಷೇಧಿಸಿದ್ದರೂ, ಅವುಗಳನ್ನು ಪಡೆದ ಮೂವರು, ಗುಂಡಿನ ದಾಳಿ ನಡೆಸಿದ್ದಾರೆ.
ಟರ್ಕಿಯಾ ಟಿಸಾಸ್ ಕಂಪನಿಯು ಈ ಬಂದೂಕುಗಳನ್ನು ತಯಾರಿಸುತ್ತದೆ. ಇವುಗಳ ಬೆಲೆಯು 6-7 ಲಕ್ಷ ರೂಪಾಯಿ ಆಗಿದೆ. ಈ ಬಂದೂಕುಗಳನ್ನು ಪಾಕಿಸ್ತಾನದಲ್ಲಿ ಹೆಚ್ಚು ಬಳಸಲಾಗುತ್ತದೆ ಹಾಗೂ ದೊಡ್ಡ ದಂಧೆಯೇ ಇದೆ. ಹಾಗಾಗಿ, ಭಾರತಕ್ಕೆ ಇವುಗಳನ್ನು ಪಾಕಿಸ್ತಾನದಿಂದ ಅಕ್ರಮವಾಗಿ ಸರಬರಾಜು ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Atiq Ahmed: ಅತೀಕ್, ಅಶ್ರಫ್ ಹತ್ಯೆ; ಅಯೋಧ್ಯೆಯಲ್ಲಿ ಅಲರ್ಟ್, ಯೋಗಿಯ ಎಲ್ಲ ಕಾರ್ಯಕ್ರಮ ರದ್ದು