ಡೆಹ್ರಾಡೂನ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡದ ಹಲ್‌ದ್ವಾನಿ (Haldwani Jail) ಜಿಲ್ಲೆಯಲ್ಲಿರುವ ಜೈಲಿನಲ್ಲಿ ಒಬ್ಬ ಮಹಿಳೆ ಸೇರಿ 45 ಕೈದಿಗಳಿಗೆ ಎಚ್‌ಐವಿ (ಏಡ್ಸ್) ದೃಢಪಟ್ಟಿದೆ. ಜೈಲಿನಲ್ಲಿರುವ ಕೈದಿಗಳಿಗೆ ಎಚ್‌ಐವಿಯ ಲಘು ಲಕ್ಷಣಗಳು ಕಂಡುಬಂದಿದ್ದು, ಮೊದಲಿಗೆ ಮಾತ್ರೆಗಳನ್ನು ನೀಡಲಾಗಿದೆ. ಇದಾದ ಬಳಿಕ ಜೈಲಧಿಕಾರಿಗಳು ಸಾಮೂಹಿಕವಾಗಿ ತಪಾಸಣೆ ನಡೆಸಿದಾಗ ಒಟ್ಟು 45 ಕೈದಿಗಳಿಗೆ ಸೋಂಕು ತಗುಲಿರುವ ವರದಿ ಬಂದಿದೆ.
“ಜೈಲಿನಲ್ಲಿರುವ ಒಬ್ಬ ಮಹಿಳೆ ಸೇರಿ ಒಟ್ಟು 45 ಕೈದಿಗಳಿಗೆ ಎಚ್‌ಐವಿ ದೃಢಪಟ್ಟಿದೆ. ಲಘು ಲಕ್ಷಣ ಇರುವವರಿಗೆ ಮಾತ್ರೆ ನೀಡಲಾಗಿದೆ. ಪರಿಸ್ಥಿತಿ ಗಂಭೀರ ಇರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್‌ಐವಿ ದೃಢಪಟ್ಟ ಕೈದಿಗಳ ಚಿಕಿತ್ಸೆಗಾಗಿಯೇ ಆ್ಯಂಟಿರೆಟ್ರೋವೈರಲ್ ಥೆರಪಿ (ART) ಕೇಂದ್ರವನ್ನು ತೆರೆಯಲಾಗಿದೆ” ಎಂದು ಸುಶೀಲ ತಿವಾರಿ ಆಸ್ಪತ್ರೆಯ ವೈದ್ಯ ಡಾ.ಪರಮ್‌ಜಿತ್ ಸಿಂಗ್ ಮಾಹಿತಿ ನೀಡಿದರು.
“ನ್ಯಾಕೋ ಮಾರ್ಗಸೂಚಿಗಳ ಅನ್ವಯವೇ ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸೌಮ್ಯ ಲಕ್ಷಣ ಇರುವವರಿಗೆ ಉಚಿತವಾಗಿ ಔಷಧಗಳನ್ನೂ ಪೂರೈಸಲಾಗಿದೆ” ಎಂದು ಮಾಹಿತಿ ನೀಡಿದರು. ಏಕಕಾಲಕ್ಕೆ ಇಷ್ಟೊಂದು ಜನರಿಗೆ ಹೇಗೆ ಎಚ್‌ಐವಿ ತಗುಲಿತು ಎಂಬುದೇ ಈಗ ಪ್ರಶ್ನೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: IPL 2023: ಸೂಪರ್ ಮ್ಯಾನ್ ರೀತಿ ಕ್ಯಾಚ್ ಪಡೆದ ಸಂಜು ಸ್ಯಾಮ್ಸನ್; ವಿಡಿಯೊ ವೈರಲ್
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಕಾರ, ಅಸುರಕ್ಷಿತ ಲೈಂಗಿಕ ಸಂಪರ್ಕ ಸೇರಿ ಹಲವು ಕಾರಣಗಳಿಂದ ಎಚ್‌ಐವಿ ದೃಢಪಡುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಮ್ಮೆ ಸೋಂಕು ದೃಢಪಟ್ಟರೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ನಿಧಾನವಾಗಿ ಕುಂದಿಸುತ್ತದೆ. ಬ್ಯಾಕ್ಟೀರಿಯಾ, ಸೋಂಕುಗಳ ವಿರುದ್ಧ ದೇಹವು ಹೋರಾಡುವುದನ್ನೇ ನಿಲ್ಲಿಸುವಷ್ಟು ಸಾಮರ್ಥ್ಯ ಎಚ್‌ಐವಿ ಸೋಂಕಿಗಿದೆ. ಎಚ್‌ಐವಿಗೆ ಚಿಕಿತ್ಸೆ ಸಾಧ್ಯವಿದ್ದು, ದೇಹವು ಮತ್ತೆ ರೋಗ ನಿರೋಧಕ ಶಕ್ತಿ ಉತ್ಪಾದಿಸುವಂತಾಗಲು 10 ವರ್ಷ ಚಿಕಿತ್ಸೆ ನೀಡಬೇಕಾಗುತ್ತದೆ.
ಕೆಲ ತಿಂಗಳ ಹಿಂದಷ್ಟೇ, ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜು ಈಗ ವಿವಾದದ ಕೇಂದ್ರಬಿಂದು ಆಗಿತ್ತು. ಅಲ್ಲಿನ ವೈದ್ಯರು ಒಂದೇ ಸಿರಿಂಜ್ ಬಳಸಿ, ಹಲವು ರೋಗಿಗಳಿಗೆ ಇಂಜೆಕ್ಷನ್ ಕೊಟ್ಟ ಕಾರಣಕ್ಕೆ ಮಗುವೊಂದಕ್ಕೆ ಎಚ್‌ಐವಿ ಸೋಂಕು ತಗುಲಿದ್ದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಟ್ ಪಾಠಕ್ ಅವರು ಈ ಬಗ್ಗೆ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಿದ್ದರು. ಈ ವಿಚಾರವನ್ನು ತನಿಖೆಗೆ ಒಳಪಡಿಸಲಾಗುವುದು ಆರೋಪಿಗಳು ಯಾರೇ ಆಗಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.