ಗುರುಗ್ರಾಮ: ತುಂಬ ಜನರಿಗೆ ಊಟ, ತಿಂಡಿ ಸೇವಿಸಿದ ಬಳಿಕ ಮೌತ್ ಫ್ರೆಶ್‌ನರ್ (Mouth Freshener) ಬಳಸುತ್ತಾರೆ. ಆ ಮೂಲಕ ಬಾಯಿಯ ದುರ್ವಾಸನೆಯನ್ನು ತಡೆಯುತ್ತಾರೆ. ಇದಕ್ಕಾಗಿಯೇ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಊಟವಾದ ಬಳಿಕ ಮೌತ್ ಫ್ರೆಶ್‌ನರ್ ನೀಡಲಾಗುತ್ತದೆ. ಹರಿಯಾಣದ ಗುರುಗ್ರಾಮದ (Gurugram) ರೆಸ್ಟೋರೆಂಟ್ ಒಂದರಲ್ಲಿ ಹೀಗೆ ಊಟವಾದ ಬಳಿಕ ರೆಸ್ಟೋರೆಂಟ್ (Restaurant) ಸಿಬ್ಬಂದಿ ನೀಡಿದ ಮೌತ್ ಫ್ರೆಶ್‌ನರ್ ಬಳಸಿದ ಐವರು ರಕ್ತ ಕಾರಿದ್ದಾರೆ. ಅವರ ನಾಲಗೆಗಳು ಸುಟ್ಟು ಹೋಗಿದ್ದು, ಐವರೂ ಅಸ್ವಸ್ಥರಾಗಿದ್ದಾರೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಮಾರ್ಚ್ 2ರಂದು ಅಂಕಿತ್ ಕುಮಾರ್ ಎಂಬುವರು ತಮ್ಮ ಪತ್ನಿ ಹಾಗೂ ಗೆಳೆಯರನ್ನು ಕರೆದುಕೊಂಡು ಗುರುಗ್ರಾಮದ ಸೆಕ್ಟರ್ 90ಯಲ್ಲಿರುವ ಲ್ಯಾಫೊರೆಸ್ಟಾ ಕೆಫೆಗೆ ಹೋಗಿದ್ದಾರೆ. ತುಂಬ ದಿನಗಳ ನಂತರ ಗೆಳೆಯರು ಸಿಕ್ಕಿದ್ದು, ಎಲ್ಲರ ಜತೆ ಊಟ ಮಾಡಲು ಅವರು ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಐವರೂ ಊಟ ಮಾಡಿದ ಬಳಿಕ ರೆಸ್ಟೋರೆಂಟ್ ಸಿಬ್ಬಂದಿಯು ಮೌತ್ ಫ್ರೆಶ್‌ನರ್ ಕೊಟ್ಟಿದ್ದಾರೆ. ಇದನ್ನು ಐವರೂ ಬಾಯಿಗೆ ಹಾಕಿಕೊಂಡು, ಮುಕ್ಕಳಿಸಿದ್ದಾರೆ. ಆದರೆ, ಮೌತ್ ಫ್ರೆಶ್‌ನರ್ ಬಾಯಿ ಸೇರುತ್ತಲೇ ಉರಿಯಲು ಆರಂಭಿಸಿದೆ. ಆಗ ಐವರಿಗೂ ಅಸಹನೀಯ ನೋವು ಉಂಟಾಗಿದೆ.
Five people have been hospitalized after eating Mouth Freshner at a Gurugram Restaurant 😱 pic.twitter.com/gsFFiAxVy1
— Rosy (@rose_k01) March 4, 2024
ಮೌತ್ ಫ್ರೆಶ್‌ನರ್ ಬಳಸಿದ ಐವರೂ ರಕ್ತದ ವಾಂತಿ ಮಾಡುವ, ಇದು ಸುಡುತ್ತಿದೆ ಎಂದು ಜೋರಾಗಿ ಕೂಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಐವರೂ ಆಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ರೆಸ್ಟೋರೆಂಟ್ ಸಿಬ್ಬಂದಿಯು ಮೌತ್ ಫ್ರೆಶ್‌ನರ್‌ನಲ್ಲಿ ಏನು ಮಿಕ್ಸ್ ಮಾಡಿದ್ದರೋ ಗೊತ್ತಿಲ್ಲ. ಅದನ್ನು ಬಳಸಿದ ಬಳಿಕ ಎಲ್ಲರೂ ವಾಂತಿ ಮಾಡಿಕೊಂಡಿದ್ದೇವೆ. ನಮ್ಮ ನಾಲಗೆಗಳು ಸುಟ್ಟು ಹೋಗಿವೆ. ಬಾಯಿ ಕೂಡ ಸುಟ್ಟಿದೆ. ಅವರು ಯಾವ ರೀತಿಯ ಆಸಿಡ್ ಕೊಟ್ಟಿದ್ದಾರೋ ಗೊತ್ತಿಲ್ಲ” ಎಂದು ಅಂಕಿತ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Energy Drink : ಎನರ್ಜಿ ಡ್ರಿಂಕ್ ಸೇವಿಸಿದ ಕೂಡಲೇ ಯುವಕ ಅಸ್ವಸ್ಥ
ಮೌತ್ ಫ್ರೆಶ್‌ನರ್ ಬಳಸಿದ ಬಳಿಕ ಇಷ್ಟೆಲ್ಲ ಅವಾಂತರವಾದ ಕಾರಣ ಅಂಕಿತ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. “ನಾನು ರೆಸ್ಟೋರೆಂಟ್ ಸಿಬ್ಬಂದಿ ಕೊಟ್ಟ ಮೌತ್ ಫ್ರೆಶ್‌ನರ್ ಪ್ಯಾಕೆಟ್‌ಅನ್ನು ವೈದ್ಯರಿಗೆ ತೋರಿಸಿದರೆ, ಅವರು ಇದು ಡ್ರೈ ಐಸ್ ಎಂದು ತಿಳಿಸಿದರು. ವೈದ್ಯರ ಪ್ರಕಾರ, ಸಾವಿಗೆ ಕಾರಣವಾಗುವ ಆಸಿಡ್ ಅದರಲ್ಲಿತ್ತು. ಹಾಗಾಗಿ, ರೆಸ್ಟೋರೆಂಟ್ ವಿರುದ್ಧ ಕ್ರಮ ತೆಗೆದುಕೊಳ್ಳಿ” ಎಂಬುದಾಗಿ ಅಂಕಿತ್ ಕುಮಾರ್ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ