Site icon Vistara News

IPO: ಈ ವಾರ 5 ಕಂಪನಿಗಳ ಐಪಿಒ ಬಿಡುಗಡೆ; ಷೇರು ಬೆಲೆ ಚೆಕ್ ಮಾಡ್ಕೊಳ್ಳಿ

5 ipo will be launched this week and Check details

ನವದೆಹಲಿ: ಇಂಡಿಯಾ ಶೆಲ್ಟರ್ ಫೈನಾನ್ಸ್ (India Shelter Finance) ಮತ್ತು ಡೋಮ್ಸ್(DOMS) ಇಂಡಸ್ಟ್ರೀಸ್ ಸೇರಿದಂತೆ ಐದು ಕಂಪನಿಗಳು ಈ ವಾರ ಷೇರು ಮಾರುಕಟ್ಟೆಗೆ ಐಪಿಒ (IPO) ಬಿಡುಗಡೆ ಮಾಡುತ್ತಿವೆ. ಐನಾಕ್ಸ್ ಗ್ರೂಪ್ ಘಟಕದ ಐನಾಕ್ಸ್ ಇಂಡಿಯಾ(Inox India), ಜೈಪುರ ಮೂಲದ ಚಿಲ್ಲರೆ ಆಭರಣ ಕಂಪನಿ ಮೋತಿಸನ್ಸ್ ಜ್ಯುವೆಲರ್ಸ್ (Motisons Jewellers) ಮತ್ತು ಮುಂಬೈ ಮೂಲದ ಸೂರಜ್ ಎಸ್ಟೇಟ್ ಡೆವಲಪರ್‌(Suraj Estate Developers) ಮೊದಲ ಐಪಿಒ ಮೂಲಕ ಷೇರುಪೇಟೆಗೆ ಲಗ್ಗೆ ಇಡುತ್ತಿವೆ. ಈ ಐದು ಕಂಪನಿಗಳು ಸುಮಾರು 4,200 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿವೆ.

ಕಳೆದ ತಿಂಗಳು 10 ಕಂಪನಿಗಳು ತಮ್ಮ ಐಪಿಒ ಯಶಸ್ವಿಯಾಗಿ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಐದು ಕಂಪನಿಗಳು ಬರುತ್ತಿವೆ. ಈ ಪಟ್ಟಿಯು ಟಾಟಾ ಟೆಕ್ನಾಲಜೀಸ್‌ನ IPO (ಆರಂಭಿಕ ಸಾರ್ವಜನಿಕ ಆಫರಿಂಗ್) ಅನ್ನು ಒಳಗೊಂಡಿತ್ತು, ಇದು ಟಾಟಾ ಗ್ರೂಪ್‌ನಿಂದ ಸುಮಾರು ಎರಡು ದಶಕಗಳಲ್ಲಿ ಆರಂಭಿಕ ಷೇರು ಮಾರಾಟವನ್ನು ನಡೆಸಿದ ಮೊದಲ ಕಂಪನಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2004ರಲ್ಲಿ ಐಪಿಒ ಬಿಡುಗಡೆ ಮಾಡಿತ್ತು.

ಒಟ್ಟಾರೆಯಾಗಿ ಭಾರತೀಯ ಐಪಿಒ ಮಾರುಕಟ್ಟೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (ನವೆಂಬರ್ ವರೆಗೆ) ಸುಮಾರು 35,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವ 44 ಕ್ಕೂ ಹೆಚ್ಚು ಐಪಿಒಗಳಿಗೆ ಸಾಕ್ಷಿಯಾಗಿದೆ. ಉತ್ತಮ ಲಾಭದ ಗ್ಯಾರಂಟಿಯ ಹಿನ್ನೆಲೆಯಲ್ಲಿ ಐಪಿಒಗಳ ಖರೀದಿಗೆ ಹೆಚ್ಚು ಹೂಡಿಕೆದಾರರು ಮುಂದಾಗುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಕಂಪನಿಗಳು ಷೇರು ಮಾರುಕಟ್ಟೆಗೆ ಕಾಲಿಡುತ್ತಿವೆ.

ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಕಂಪನಿ ಇಂಡಿಯಾ ಶೆಲ್ಟರ್ ಫೈನಾನ್ಸ್ ಮತ್ತು ಪೆನ್ಸಿಲ್ ತಯಾರಕ ಡೋಮ್ಸ್ ಇಂಡಸ್ಟ್ರೀಸ್‌ನ ಐಪಿಒಗಳು ಡಿಸೆಂಬರ್ 13–15ರ ಅವಧಿಯಲ್ಲಿ ಸಾರ್ವಜನಿಕರಿಗೆ ತೆರೆಯಲಿವೆ. ಈ ಎರಡು ಕಂಪನಿಗಳು ತಲಾ 1200 ಕೋಟಿ ಹಣವನ್ನು ಮಾರುಕಟ್ಟೆಯಿಂದ ಎತ್ತಲಿವೆ.

ಐನಾಕ್ಸ್ ಇಂಡಿಯಾ ಐಪಿಒ ಕೂಡ ಸಾರ್ವಜನಿಕರಿಗೆ ಡಿಸೆಂಬರ್ 14ರಿಂದ ಶುರುವಾಗಲಿದ್ದು, ಡಿಸೆಂಬರ್ 18ಕ್ಕೆ ಕೊನೆಯಾಗಲಿದೆ. ಹಾಗೆಯೇ ಡಿಸೆಂಬರ್ 18ರಿಂದ ಮೋತಿಸನ್ಸ್ ಜೆವೆಲ್ಲರ್ಸ್ ಮತ್ತು ಸೂರಜ್ ಎಸ್ಟೇಟ್ ಡೆವಲಪರ್ಸ್ ಐಪಿಒಗಳು ಸಾರ್ವಜನಿಕರಿಗೆ ಡಿಸೆಂಬರ್ 18ರಿಂದ ಶುರುವಾಗಲಿವೆ ಮತ್ತು ಡಿಸೆಂಬರ್ 20ಕ್ಕೆ ಮುಕ್ತಾಯವಾಗಲಿವೆ.

ಈ ಐದೂ ಕಂಪನಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಲು ಮುಂದಾಗುತ್ತಿವೆ. ದುಡಿಯುವ ಬಂಡವಾಳ ಅಗತ್ಯಗಳು ಮತ್ತು ಸಾಲ ಮರುಪಾವತಿಗಾಗಿ ಐಪಿಒಗಳನ್ನು ಲಾಂಚ್ ಮಾಡುತ್ತಿವೆ.

ಇಂಡಿಯಾ ಶೆಲ್ಟರ್ ಫೈನಾನ್ಸ್ 800 ಕೋಟಿ ರೂ. ಮೌಲ್ಯದ ಇಕ್ವಿಟಿ ಷೇರ್ಸ್ ಮತ್ತು ಬಂಡವಾಳ ಹೂಡಿಕೆದಾರ ಷೇರುದಾರರಿಂದ ಆಫರ್ ಫಾರ್ ಷೇರ್ ಮೂಲಕ 400 ಕೋಟಿ ರೂ. ಸಂಗ್ರಹಿಸಲಿದೆ. ಕಂಪನಿಯು ಪ್ರತಿ ಷೇರ್ ಬೆಲೆಯನ್ನು 469ರಿಂದ 493ರವರೆಗೂ ನಿಗದಿಪಡಿಸಿದೆ.

ಡೋಮ್ಸ್ ಷೇರು ಪೇಟೆಯ ಮೂಲಕ ಒಟ್ಟು 850 ಕೋಟಿ ರೂ. ಸಂಗ್ರಹಿಸಲಿದೆ. ಕಂಪನಿಯ ಐಪಿಒ ಬೆಲೆ 750 ರೂ.ನಿಂದ 790 ರೂ.ವರೆಗೂ ನಿಗದಿ ಮಾಡಿದೆ. ಪ್ರತಿ ಐಪಿಒ ಬೆಲೆಯನ್ನು 627ರಿಂದ 660 ರೂ.ಗೆ ನಿಗದಿ ಮಾಡಿರುವ ಐನಾಕ್ಸ್ ಇಂಡಿಯಾ ಒಟ್ಟು 1,459 ಕೋಟಿ ರೂ. ಗಳಿಸಲಿದೆ. ಇನ್ನೂ ಸೂರಜ್ ಎಸ್ಟೇಟ್ ಡೆವಲಪರ್ಸ್ ಐಪಿಒಗಳ ಮೂಲಕ 400 ಕೋಟಿ ಸಂಗ್ರಹಿಸಲಿದೆ.

ಈ ಸುದ್ದಿಯನ್ನೂ ಓದಿ: Inox India: ಐನಾಕ್ಸ್‌ ಐಪಿಒ ಡಿ. 14ರಿಂದ ಆರಂಭ; ಪ್ರತಿ ಷೇರಿಗೆ ಎಷ್ಟು ಬೆಲೆ?

Exit mobile version