Site icon Vistara News

Jammu Kashmir Flash Flood: ಜಮ್ಮ- ಕಾಶ್ಮೀರದಲ್ಲಿ ಭೂಕುಸಿತ, ಹಠಾತ್ ಪ್ರವಾಹ: 5 ಸಾವು

jammu kashmir flash flood

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & Kashmir) ಸಂಭವಿಸಿದ ಹಠಾತ್‌ ಭೂಕುಸಿತ (Landslide) ಮತ್ತು ಪ್ರವಾಹದಲ್ಲಿ (Flash flood) ಐವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಹಲವಾರು ಮನೆಗಳಿಗೆ ಹಾನಿಯಾಗಿದ್ದು, ನೂರಾರು ನಿವಾಸಿಗಳು ತೊಂದರೆಗೀಡಾಗಿದ್ದಾರೆ.

ದೋಡಾ, ರಿಯಾಸಿ, ಕಿಶ್ತ್ವಾರ್, ರಾಂಬನ್ ಮತ್ತು ಬಾರಾಮುಲ್ಲಾ ಸೇರಿದಂತೆ ಹಲವಾರು ಗುಡ್ಡಗಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳು ಸಂಭವಿಸಿವೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಭೂಕುಸಿತವುಂಟಾಗುತ್ತಿದ್ದು, ರಸ್ತೆ ಮುಚ್ಚಲ್ಪಟ್ಟಿದೆ.

ಕುಪ್ವಾರದಲ್ಲಿ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸಿದೆ. ನೀರಿನ ಮಟ್ಟ ಕಡಿಮೆಯಾಗಿದೆ ಮತ್ತು ಜನರು ತಮ್ಮ ಹಾನಿಗೊಳಗಾದ ಮನೆಗಳಿಗೆ ಮರಳುತ್ತಿದ್ದಾರೆ. ನಿನ್ನೆಯ ದೃಶ್ಯಗಳಲ್ಲಿ ಕಂಡುಬರುವಂತೆ, ಹಠಾತ್ ಪ್ರವಾಹದಿಂದಾಗಿ ರಸ್ತೆಯ ಒಂದು ಭಾಗ ಕೊಚ್ಚಿಹೋಗಿದೆ. ಹಲವಾರು ಮನೆಗಳು ಮೊಣಕಾಲು ಆಳದ ನೀರಿನಲ್ಲಿ ಜಲಾವೃತವಾಗಿವೆ. ನದಿಗೆ ಮುಖ ಮಾಡಿರುವ ಮನೆಯ ಒಂದು ಭಾಗ ಕೊಚ್ಚಿ ಹೋಗಿದೆ. ನಿನ್ನೆ ಅಧಿಕಾರಿಗಳು ಕುಪ್ವಾರದ ಪೊಹ್ರು ನಲ್ಲಗೆ ಅಪಾಯದ ಎಚ್ಚರಿಕೆಯನ್ನು ನೀಡಿದ್ದಾರೆ.

ಸಮಯೋಚಿತ ಸ್ಥಳಾಂತರ ಕಾರ್ಯಾಚರಣೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜೀವಗಳನ್ನು ಉಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಹೇಳಿದೆ. ಹಂದ್ವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಅಜೀಜ್ ಅಹ್ಮದ್, “ನಾವು ನಷ್ಟವನ್ನು ಲೆಕ್ಕ ಹಾಕುತ್ತಿದ್ದೇವೆ. ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.

ಪ್ರವಾಹವು ಕುಪ್ವಾರಾ ಜಿಲ್ಲೆಯಲ್ಲಿ ಶುಮ್ರಿಯಾಲ್ ಸೇತುವೆ, ಖುಮ್ರಿಯಾಲ್ ಸೇತುವೆ, ಶತ್ಮುಕಮ್ ಸೇತುವೆ, ಸೋಹಿಪೋರಾ-ಹಯ್ಹಮಾ ಸೇತುವೆ, ಫರ್ಕ್ಯಾನ್ ಸೇತುವೆ, ಕುಪ್ವಾರದಲ್ಲಿರುವ ಎರಡು ಗ್ರಾಮೀಣಾಭಿವೃದ್ಧಿ ಇಲಾಖೆ ಕಟ್ಟಡಗಳು ಮತ್ತು ಸಹಾಯಕ ನಿರ್ದೇಶಕ ಕರಕುಶಲ ಕಚೇರಿ ಕಟ್ಟಡ ಸೇರಿದಂತೆ ಕೆಲವು ಪ್ರಮುಖ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ. ಡೋಬನ್ ಕಚಮಾ ಅಣೆಕಟ್ಟಿನಲ್ಲಿ ಸೋರಿಕೆ ಮತ್ತು ಒಡೆತದ ಕಾರಣ ಶುಮ್ರ್ಯಾಲ್-ಗುಂಡಜಾಂಗರ್ ರಸ್ತೆ ಕಡಿತಗೊಂಡಿದೆ.

“ಪ್ರವಾಹದಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ, ನಮಗೆ ಆಹಾರ ಮತ್ತು ಬಟ್ಟೆ ಬೇಕು” ಎಂದು ಸ್ಥಳೀಯರು ಹೇಳಿದ್ದಾರೆ. ನಿರಂತರ ಮಳೆಯಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿಯ ಕೆಲವು ಭಾಗಗಳು ನೀರಿನಿಂದ ಮುಳುಗಿವೆ. ಶ್ರೀನಗರದ ಹಲವಾರು ಪ್ರದೇಶಗಳು ಮತ್ತು ಕಾಶ್ಮೀರ ಕಣಿವೆಯ ಇತರ ತಗ್ಗು ಪ್ರದೇಶಗಳು ಜಲಾವೃತವಾದವು.

ಕಳೆದ ಮೂರು ದಿನಗಳಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಶ್ಮೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾಶ್ಮೀರ ವಿಶ್ವವಿದ್ಯಾಲಯವು ಇಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.

ಇದನ್ನೂ ಓದಿ: Sikkim Flash Flood: ದಿಢೀರ್‌ ಪ್ರವಾಹದಲ್ಲಿ ಮೃತಪಟ್ಟ 19 ಮಂದಿ ಪೈಕಿ 6 ಯೋಧರು

Exit mobile version