Site icon Vistara News

ಪಾಳುಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರ ದುರ್ಮರಣ

Maharashtra Well

5 Of Family Die After Falling Into Abandoned Well In Bid To Save Cat In Maharashtra

ಮುಂಬೈ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ (Ahmednagar District) ಬಾವಿಗೆ ಬಿದ್ದ ಬೆಕ್ಕನ್ನು (Cat) ರಕ್ಷಿಸಲು ಹೋದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ (ಏಪ್ರಿಲ್‌ 9) ಬೆಕ್ಕು ಬಾವಿಗೆ ಬಿದ್ದಿದ್ದು, ಇದನ್ನು ರಕ್ಷಿಸಲು ಒಂದೇ ಕುಟುಂಬದ ಆರು ಜನ ಬಾವಿಗೆ ಜಿಗಿದಿದ್ದಾರೆ. ಆರು ಮಂದಿಯಲ್ಲಿ ಒಬ್ಬ ಮಾತ್ರ ಮೇಲೆ ಬರಲು ಸಾಧ್ಯವಾಗಿದ್ದು, ಉಳಿದವರು ಬಾವಿಯಲ್ಲೇ ಸಿಲುಕಿ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರು (Police) ತಿಳಿಸಿದ್ದಾರೆ.

ಅಹ್ಮದ್‌ನಗರ ಜಿಲ್ಲೆಯ ವಾಡ್ಕಿ ಎಂಬ ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದೆ. ಮೃತರನ್ನು ಮಾಣಿಕ್‌ ಕಾಳೆ (65), ಇವರ ಪುತ್ರ ಸಂದೀಪ್‌ (36), ಅನಿಲ್‌ ಕಾಳೆ (53), ಇವರ ಪುತ್ರ ಬಬ್ಲು (28) ಹಾಗೂ ಬಾಬಾಸಾಹೇಬ್‌ ಗಾಯಕ್ವಾಡ್‌ (36) ಎಂದು ಗುರುತಿಸಲಾಗಿದೆ. ಮಾಣಿಕ್‌ ಕಾಳೆ ಅವರ ಮತ್ತೊಬ್ಬ ಪುತ್ರ ವಿಜಯ್‌ (35) ಎಂಬುವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬೆಕ್ಕು ಬಾವಿಗೆ ಬಿದ್ದಿದೆ. ಇದನ್ನು ರಕ್ಷಿಸಲು ಮೊದಲು ಒಬ್ಬರು ಜಿಗಿದಿದ್ದಾರೆ. ಜಿಗಿದವರು ಮೇಲೆ ಬರದ ಕಾರಣ ಮತ್ತೊಬ್ಬರು ಜಿಗಿದಿದ್ದಾರೆ. ಹೀಗೆ, ಒಬ್ಬರನ್ನು ರಕ್ಷಿಸಲು ಒಬ್ಬರು ಜಿಗಿದಿದ್ದು ಐವರ ಪ್ರಾಣಕ್ಕೆ ಕುತ್ತು ತಂದಿದೆ. ವಿಜಯ್‌ ಮಾತ್ರ ಬಾವಿಯಲ್ಲೇ ದಡಕ್ಕೆ ಸೇರಿದ್ದು, ಪೊಲೀಸರು ಆತನ ಸೊಂಟಕ್ಕೆ ಹಗ್ಗ ಕಟ್ಟಿ ರಕ್ಷಿಸಿದ್ದಾರೆ.

“ಬಾವಿಯು ಪಾಳು ಬಿದ್ದಿದ್ದು, ಅದನ್ನು ಬಯೋಗ್ಯಾಸ್‌ಗಾಗಿ ಬಳಸಲಾಗುತ್ತಿತ್ತು. ಬಾವಿಯಲ್ಲಿ ಗೋವಿನ ಸಗಣಿಯನ್ನು ತುಂಬಲಾಗಿತ್ತು. ಬರೀ ತ್ಯಾಜ್ಯವೇ ಬಾವಿಯಲ್ಲಿದೆ. ಇದರಿಂದಾಗಿ ಜಿಗಿದವರು ಹೊರಗೆ ಬರಲು ಸಾಧ್ಯವಾಗಿಲ್ಲ. ಒಬ್ಬನ ಸೊಂಟಕ್ಕೆ ಹಗ್ಗ ಕಟ್ಟಿ ರಕ್ಷಿಸಲಾಗಿದ್ದು, ಆತನು ಚಿಕಿತ್ಸೆ ಪಡೆಯುತ್ತಿದ್ದಾನೆ” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

“ಮಂಗಳವಾರ ಸಾಯಂಕಾಲ ಶವಗಳನ್ನು ಹೊರತೆಗೆಯಲು ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ, ಮಂಗಳವಾರ ರಾತ್ರಿ 11 ಗಂಟೆ ವೇಳೆ ಒಬ್ಬನ ಶವ ಮಾತ್ರ ತೆಗೆಯಲು ಸಾಧ್ಯವಾಯಿತು. ಬುಧವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ, ಮಧ್ಯಾಹ್ನದ ವೇಳೆಗೆ ಎಲ್ಲ ಶವಗಳನ್ನು ಹೊರತೆಗೆಯಲಾಯಿತು” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Fire Accident: ಭೀಕರ ಅಗ್ನಿ ದುರಂತ; ಒಂದೇ ಕುಟುಂಬದ 7 ಮಂದಿ ಸಜೀವ ದಹನ

Exit mobile version