Site icon Vistara News

ಸುರಂಗದಿಂದ 41 ಜನರ ರಕ್ಷಣೆಗೆ 5 ಪ್ಲಾನ್‌ ರೆಡಿ, ವಿದೇಶಿ ತಜ್ಞರ ಎಂಟ್ರಿ; ಕಂಪ್ಲೀಟ್‌ ಯೋಜನೆ ಹೀಗಿದೆ

Uttarakhand Tunnel

Uttarakhand tunnel rescue operation in final stages, ambulances wait outside tunnel

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ (Uttarkashi District) ಸುರಂಗ ಕುಸಿದು (Uttarakhand Tunnel Collapse) 8 ದಿನ ಕಳೆದಿವೆ. ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೈಗೊಳ್ಳುತ್ತಿರುವ ಕಾರ್ಯಾಚರಣೆಯು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟಾದರೂ ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗದ ಕಾರಣ ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರನ್ನು ಕರೆಸಲಾಗಿದೆ. ಅತ್ಯಾಧುನಿಕ ಉಪಕರಣಗಳನ್ನೂ ಬಳಸಲಾಗುತ್ತಿದೆ. ಇದರ ಜತೆಗೆ ಕಾರ್ಮಿಕರ ರಕ್ಷಣೆಗೆ ಐದು ಆಯ್ಕೆಗಳ ಪ್ಲಾನ್‌ ರೂಪಿಸಲಾಗಿದೆ. ಆಯ್ಕೆಗಳು ಯಾವವು ಎಂಬುದು ಸೇರಿ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು

ಸುಮಾರು 200 ಮೀಟರ್‌ ಸುರಂಗ ಕುಸಿದ ಕಾರಣ ರಕ್ಷಣಾ ಕಾರ್ಯಾಚರಣೆಯು ವಿಳಂಬವಾಗುತ್ತಿದೆ. ಅವಶೇಷವನ್ನು ಹೊರತೆಗೆಯಲು ಕಷ್ಟವಾಗುತ್ತಿದೆ. ಆದರೂ, ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ONGC), ಸತ್ಲುಜ್‌ ಜಲ ವಿದ್ಯುತ್‌ ನಿಗಮ (SJVNL), ರೈಲ್‌ ವಿಕಾಸ ನಿಗಮ ಲಿಮಿಟೆಡ್‌ (RVNL), ನ್ಯಾಷನಲ್‌ ಹೈವೇಸ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (NHIDCL) ಹಾಗೂ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (THDCL) ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ವಿದೇಶಿ ತಜ್ಞರ ಎಂಟ್ರಿ

ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ವಿದೇಶಿ ತಜ್ಞರ ತಂಡವೂ ಸ್ಥಳಕ್ಕೆ ಆಗಮಿಸಿದೆ. ಇಂಟರ್‌ನ್ಯಾಷನಲ್‌ ಟನೆಲಿಂಗ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಸಂಸ್ಥೆಯ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರ ತಂಡವು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಇನ್ನು ಅಮೆರಿಕದಲ್ಲಿ ತಯಾರಾದ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳು, ಪುಶ್‌ ಇನ್‌ ಪೈಪ್‌ಗಳು ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ.

ಏಜೆನ್ಸಿಗಳು, ತಜ್ಞರ ಪ್ಲಾನ್‌ಗಳು ಯಾವವು?

1. ಲಂಬವಾಗಿ ಕೊರೆಯುವುದು (Vertical Drilling)

ಸತ್ಲುಜ್‌ ಜಲ ವಿದ್ಯುತ್‌ ನಿಗಮದ ಸಿಬ್ಬಂದಿಯು ಸುರಂಗವನ್ನು ಲಂಬವಾಗಿ ಕೊರೆಯುವ (Vertical Drilling) ಕಾರ್ಯದಲ್ಲಿ ನಿರತರಾಗಿದ್ದಾರೆ. ಒಡಿಶಾ ಹಾಗೂ ಗುಜರಾತ್‌ನಿಂದ 75 ಟನ್‌ ತೂಕದ ಸಲಕರಣೆಗಳನ್ನು ರೈಲುಗಳ ಮೂಲಕ ಸಾಗಣೆ ಮಾಡಲಾಗಿದ್ದು, ಇವುಗಳ ಮೂಲಕ ವರ್ಟಿಕಲ್‌ ಆಗಿ ಡ್ರಿಲ್ಲಿಂಗ್‌ ಮಾಡಲಾಗುತ್ತಿದೆ.

2. ಬೆಟ್ಟದ ತುದಿಗೆ ರಸ್ತೆ ನಿರ್ಮಾಣ

ಲಂಬವಾಗಿ ಕೊರೆಯುವ ಯೋಜನೆ ರೂಪಿಸಿದ ಕಾರಣ ಸುರಂಗದ ಬಳಿಕ ಬೆಟ್ಟದ ತುದಿಗೆ ಒಂದೇ ದಿನದಲ್ಲಿ ಗಡಿ ರಸ್ತೆಗಳ ಸಂಸ್ಥೆಯು (BRO) ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಸುರಂಗ ಕೊರೆಯಲು, ಬೆಟ್ಟದ ತುದಿಗೆ ಸಲಕರಣೆಗಳನ್ನು ಸಾಗಿಸಲು ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ರಸ್ತೆ ನಿರ್ಮಾಣವಾದ ಬಳಿಕ ರೈಲ್‌ ವಿಕಾಸ ನಿಗಮ ಲಿಮಿಟೆಡ್‌ ಏಜೆನ್ಸಿಯು ಪೈಪ್‌ಲೈನ್‌ ಮೂಲಕ ಸುರಂಗ ಕೊರೆಯಲು ಬೇಕಾದ ಅಗತ್ಯ ಉಪಕರಣಗಳನ್ನು ಒದಗಿಸಲಿದೆ.

‌3. ಬಾರ್‌ಕೋಟ್‌ ತುದಿಯಿಂದ ಡ್ರಿಲ್ಲಿಂಗ್

ಸಿಲ್‌ಕ್ಯಾರ ಸುರಂಗದ ಬಾರ್‌ಕೋಟ್‌ ತುದಿಯಿಂದಲೂ ವರ್ಟಿಕಲ್‌ ಆಗಿ ಕೊರೆಯಲು ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ ಮುಂದಾಗಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಲಿರುವ ಸಿಬ್ಬಂದಿಯು, ಮಂಗಳವಾರದಿಂದ ಡ್ರಿಲ್ಲಿಂಗ್‌ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

4. ಹಾರಿಜಾಂಟಲ್‌ ಬೋರಿಂಗ್‌

ಲಂಬವಾಗಿ ಡ್ರಿಲ್ಲಿಂಗ್‌ ಮಾಡುವ ಜತೆಗೆ ಹಾರಿಜಾಂಟಲ್‌ (ಅಡ್ಡ) ಬೋರಿಂಗ್‌ ಕೂಡ ನಡೆಯಲಿದೆ. ಇದಕ್ಕಾಗಿ ಅಮೆರಿಕದ ಯಂತ್ರವನ್ನು ತರಿಸಲಾಗಿದೆ. ಕಲ್ಲು ಸೇರಿ ಜಟಿಲ ವಸ್ತುಗಳನ್ನು ಪುಡಿ ಮಾಡಲು ಈ ಯಂತ್ರವನ್ನು ತರಿಸಲಾಗಿದೆ. ಸೋಮವಾರದಿಂದ ಹಾರಿಜಾಂಟಲ್‌ ಬೋರಿಂಗ್‌ ಶುರುವಾಗಿದೆ.

ಇದನ್ನೂ ಓದಿ: ಉತ್ತರಾಖಂಡ ಸುರಂಗದಲ್ಲಿ ‌’ಎಸ್ಕೇಪ್‌ ರೂಟ್’ ಇಲ್ಲ; 41 ಜನಕ್ಕೆ ಅಪಾಯದ ಬೆನ್ನಲ್ಲೇ ಹಗರಣದ ವಾಸನೆ!

5. ರೋಬೊಗಳ ಬಳಕೆ

ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ಇನ್ನೂ ನಾಲ್ಕೈದು ದಿನ ಬೇಕಾಗುವ ಕಾರಣ ಒಳಗಿರುವ ಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ನಿರ್ಣಾಯಕವಾಗಿದೆ. ಸುರಂಗದ ಅವಶೇಷಗಳು ಹಾಗೂ ಸುರಂಗದ ಚಾವಣಿ ಮಧ್ಯೆ ಜಾಗ ಇರಬಹುದು ಎಂದು ಅಂದಾಜಿಸಲಾಗಿದೆ. ಜಾಗ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರೋಬೊಗಳನ್ನು ಬಳಸಲಾಗುತ್ತದೆ. ಆ ಜಾಗದಲ್ಲಿ ಮತ್ತೊಂದು ಪೈಪ್‌ಲೈನ್‌ ಅಳವಡಿಸಿ, ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡುವುದು ಯೋಜನೆಯ ಭಾಗವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version