Site icon Vistara News

5 Soldiers Killed: ಲಡಾಕ್‌ನ ನದಿಯಲ್ಲಿ ಸೇನಾ ವಾಹನ ಮಗುಚಿ ಭೀಕರ ದುರಂತ; ಐವರು ಯೋಧರು ಹುತಾತ್ಮ

5 Soldiers Killed

5 Soldiers Killed

ಲಡಾಕ್‌: ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆ (Line of Actual Control)ಯ ಬಳಿ ಶ್ಯೋಕ್ (Shyok) ನದಿ ದಾಟುವ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾಗಿ ಐವರು ಸೈನಿಕರು ಮೃತಪಟ್ಟಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ (5 Soldiers Killed). ಮೃತಪಟ್ಟ ಐವರು ಜೂನಿಯರ್ ಕಮಿಷನ್ಡ್ ಆಫೀಸರ್ (Junior Commissioned Officer) ಎಂದು ಗುರುತಿಸಲಾಗಿದೆ.

ಲಡಾಕ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ ಬಳಿ ಟಿ -72 ಟ್ಯಾಂಕ್‌ (T-72 Tank) ನದಿಯನ್ನು ದಾಟುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಅಪಘಾತದ ವೇಳೆ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದ ಸೈನಿಕರು ತಮ್ಮ ಟಿ -72 ಟ್ಯಾಂಕ್‌ನಲ್ಲಿ ಲೇಹ್‌ನಿಂದ 148 ಕಿ.ಮೀ. ದೂರದಲ್ಲಿರುವ, ಚೀನಾ ಗಡಿ ಸಮೀಪದ ದೌಲತ್ ಬೇಗ್ ಓಲ್ಡಿಯ ಮಂದಿರ್ ಮೋರ್ಹ್ ಬಳಿ ನದಿಯನ್ನು ದಾಟುತ್ತಿದ್ದರು.

ʼʼಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ನದಿ ದಾಟುವಾಗ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಈ ದುರ್ಘಟನೆ ನಡೆದಿದೆ. ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆʼʼ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಹಿಮ ಕರಗುವಿಕೆಯಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದೆ. ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.

ರಾಜನಾಥ್‌ ಸಿಂಗ್‌ ಸಂತಾಪ

ಘಟನೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ʼʼಲಡಾಕ್‌ನಲ್ಲಿ ನದಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ನಮ್ಮ ಐವರು ಧೈರ್ಯಶಾಲಿ ಸೈನಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಮ್ಮ ಸೈನಿಕರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

ಶ್ರೀನಗರ: ಕಳೆದ ಕೆಲ ದಿನಗಳಿಂದ ಉಗ್ರರ ದಾಳಿಗೆ ನಲುಗಿ ಹೋಗಿರುವ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಜೂನ್‌ 13ರಂದು ಮತ್ತೊಂದು ದುರಂತ ಸಂಭವಿಸಿತ್ತು. ರಾಜೌರಿ ಜಿಲ್ಲೆಯಲ್ಲಿ ಸೇನೆಯ ವಾಹನವೊಂದು (Army Vehicle) ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರೆ, ನಾಲ್ವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನೌಶೇರಾ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಭವಾನಿ ಗ್ರಾಮದ ಮೂಲಕ ಸೇನಾ ವಾಹನವು ಗುರುವಾರ ಸಂಜೆ ತೆರಳುತ್ತಿತ್ತು. ವಾಹದಲ್ಲಿ ಐವರು ಯೋಧರು ಇದ್ದರು. ಇದೇ ವೇಳೆ, ವಾಹನವು ಚಾಲಕನ ನಿಯಂತ್ರಣ ತಪ್ಪಿದ್ದು, ಕಂದಕಕ್ಕೆ ಉರುಳಿದೆ. ದುರಂತ ಸಂಭವಿಸುತ್ತಲೇ ಐವರೂ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಒಬ್ಬ ಯೋಧ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ. ಹಾಗೆಯೇ, ಎಲ್ಲ ಸೈನಿಕರನ್ನು ಗಡಿಯಲ್ಲಿ ನಿಯೋಜಿಸುವ ಮೂಲಕ ಉಗ್ರರಿಗೆ ತಿರುಗೇಟು ನೀಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Exit mobile version